ಸಮಗ್ರ ನ್ಯೂಸ್: ಕಳೆದ ಜನವರಿಯಲ್ಲಿ ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ನೀಡಿ ಪರಿಸರ ಹಾನಿಗೆ ಕಾರಣವಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಸಫಾರಿ ಸೇರಿದಂತೆ ಎಲ್ಲ ರೀತಿಯ ಹಣ ಸ್ವೀಕೃತಿಗೆ ಆನ್‍ಲೈನ್ ಮತ್ತು ಕಂಪ್ಯೂಟರೈಸ್ಡ್ ಬಿಲ್ ನೀಡಲು ಹಾಗೂ ಚಾರಣ ತಾಣಗಳಿಗೆ ಹೋಗಲು ಆನ್‍ಲೈನ್ ಬುಕ್ಕಿಂಗ್ ಮಾಡಿಕೊಳ್ಳಲು ಹೊಸ ತಂತ್ರಾಂಶ ಸಿದ್ಧಪಡಿಸಲು ಇಲಾಖೆ ಮುಂದಾಗಿದೆ.
ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ನೀಡಿದ ಸಂದರ್ಭದಲ್ಲಿ ವನ್ಯಜೀವಿಗಳಿಗೆ ಸಮಸ್ಯೆಯಾಗಿದ್ದ ಹಿನ್ನೆಲೆಯಲ್ಲಿ ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ತಾಣಗಳಿಗೆ ಚಾರಣಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಬರ್ಂಧಿಸಿತ್ತು. ಅದರಿಂದ 24 ಚಾರಣ ತಾಣಗಳಿಗೆ ಆನ್‍ಲೈನ್ ಬುಕ್ಕಿಂಗ್ ಇಲ್ಲದೆ ಪ್ರವೇಶ ನಿಬರ್ಂಧಿಸಲಾಗಿತ್ತು. ಇದೀಗ ಚಾರಣಿಗರ ಅನುಕೂಲಕ್ಕಾಗಿ ಪ್ರತ್ಯೇಕ ತಂತ್ರಾಂಶ ಮತ್ತು ವೆಬ್‍ಸೈಟ್ ಸಿದ್ಧಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಈ ಕುರಿತಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಇತ್ತೀಚೆಗೆ ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸೂಚನೆ ನೀಡಿದ್ದು, ಮುಂದಿನ ಒಂದು ತಿಂಗಳಲ್ಲಿ ಚಾರಣಕ್ಕೆ ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಲು ತಿಂಗಳೊಳಗೆ ವೆಬ್‍ಸೈಟ್ ಸಿದ್ಧಪಡಿಸುವಂತೆ ತಿಳಿಸಿದ್ದಾರೆ.
ಹಾಗೆಯೇ, ಸಫಾರಿ ಸೇರಿದಂತೆ ಅರಣ್ಯ ಇಲಾಖೆ ಜನರಿಂದ ಸ್ವೀಕರಿಸಲಾಗುವ ಹಣವನ್ನು ಆನ್‍ಲೈನ್ ಮೂಲಕ ಪಾವತಿಸುವುದಕ್ಕೆ ವ್ಯವಸ್ಥೆ ಹಾಗೂ ನಗದು ರೂಪದಲ್ಲಿ ಶುಲ್ಕ ನೀಡಿದರೆ ಅದಕ್ಕೆ ಬದಲಾಗಿ ಕಂಪ್ಯೂಟರೈಸ್ಡ್ ಬಿಲ್ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಮುಂದಿನ ಒಂದು ತಿಂಗಳೊಳಗಾಗಿ ಈ ಎರಡೂ ವ್ಯವಸ್ಥೆಗಳನ್ನು ಜಾರಿಗೆ ತಂದು ಅರಣ್ಯ ಇಲಾಖೆಯ ಶುಲ್ಕ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.