ಸಮಗ್ರ ನ್ಯೂಸ್: ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಬುದ್ಧ (21) ಎಂಬಾಕೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಈ ಸಾವಿನ ಹಿಂದೆ ಆಕೆಯ ತಾಯಿ ಅನುಮಾನ ವ್ಯಕ್ತಪಡಿಸಿದರು. ಇದೇ ವಿಚಾರವಾಗಿ ಈ ಸಾವಿಗೆ ಈಗ ಟ್ವಿಸ್ಟ್ ಸಿಕ್ಕಿದೆ.
ಹೌದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಸಾಬೀತಾಗಿತ್ತು. ಇದೇ ವಿಚಾರವಾಗಿ ಭೇದಿಸಿದ ಪೊಲೀಸರು ಕೊಲೆಗಾರರು ಯಾರು? ಎಂದು ಪತ್ತೆಹಚ್ಚಿದ್ದಾರೆ. ಆದರೆ ಕನ್ನಡಕ ರಿಪೇರಿ ವಿಚಾರಕ್ಕೆ ಪ್ರಬುದ್ಧಳ ಕೊಲೆ ನಡೆದಿದ್ದು ಮಾತ್ರ ವಿಪರ್ಯಾಸ.
ಪ್ರಬುದ್ಧಳ ತಮ್ಮ ಹಾಗೂ ಹತ್ಯೆ ಮಾಡಿದ ಆರೋಪಿ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ತನ್ನ ಸ್ನೇಹಿತನ ಕನ್ನಡಕವನ್ನು ಡ್ಯಾಮೇಜ್ ಮಾಡಿದ್ದ. ಇದನ್ನು ರಿಪೇರಿ ಮಾಡಿಸಿ ಕೊಡು ಎಂದು ಸ್ನೇಹಿತ ಪಟ್ಟು ಹಿಡಿದಿದ್ದ. ಆದರೆ ರಿಪೇರಿಗೆ ಕಾಸಿಲ್ಲದೇ ಅಪ್ರಾಪ್ತ ಆರೋಪಿ ಸುಮ್ಮನಾಗಿದ್ದ. ಕೊಲೆಯಾದ ದಿನ ಪ್ರಬುದ್ಧ ಮನೆಗೆ ಬಂದಿದ್ದ ಆರೋಪಿ, ಪ್ರಬುದ್ಧ ಪರ್ಸ್‌ನಲ್ಲಿದ್ದ ಎರಡು ಸಾವಿರ ರೂಪಾಯಿ ಕದ್ದಿದ್ದ. ಆರೋಪಿ ಕದಿಯುವುದನ್ನು ಕಂಡ ಪ್ರಬುದ್ಧ ಪ್ರಶ್ನೆ ಮಾಡಿದ್ದಳು. ಇದರಿಂದ ಗಾಬರಿಗೊಂಡ ಆರೋಪಿ ಕ್ಷಮಿಸಿಬಿಡು ಎಂದು ಕಾಲು ಹಿಡಿದುಕೊಂಡಿದ್ದ.
ಆರೋಪಿ ಕಾಲು ಹಿಡಿದಾಗ ಪ್ರಬುದ್ಧ ಆಯ ತಪ್ಪಿ ಬಿದ್ದಿದ್ದಳು. ಈ ವೇಳೆ ತಲೆಗೆ ಪೆಟ್ಟು ಬಿದ್ದಾಗ, ಪ್ರಜ್ಞೆ ತಪ್ಪಿದ್ದಳು. ಇದರಿಂದ ಆತಂಕಗೊಂಡ ಆರೋಪಿ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಕೈ ಹಾಗೂ ಕುತ್ತಿಗೆಯನ್ನು ಕೊಯ್ದು ಅಲ್ಲಿಂದ ಪರಾರಿ ಆಗಿದ್ದ. ಪ್ರಜ್ಞೆ ತಪ್ಪಿದ್ದ ಪ್ರಬುದ್ಧ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಸುಬ್ರಹ್ಮಣ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.