ಸಮಗ್ರ ನ್ಯೂಸ್: ಚಿತ್ರಮಂದಿರಗಳಿಗೆ ಜನ ಬರುವುದು ಇತ್ತೀಚೆಗೆ ತೀವ್ರವಾಗಿ ಕಡಿಮೆಯಾಗಿದ್ದು. ಇದರಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಜನರಿಲ್ಲದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ನಡೆಸುವುದು ಕಷ್ಟವಾಗಿದೆ ಎಂದು ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡುವ ನಿರ್ಧಾರ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಈಗ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳು ಅನುಭವಿಸುತ್ತಿರುವ ನಷ್ಟದಿಂದ ಪಾರಾಗಲು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡಬೇಕು ಎಂಬ ಚರ್ಚೆ ಜೋರಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಂದು ಚಿತ್ರರಂಗದ ಪ್ರಮುಖರ ಸಭೆ ನಡೆದಿದ್ದು, ತೀರ್ಮಾನ ಪ್ರಕಟವಾಗಿದೆ.
ಇಂದು ಫಿಲಂ ಚೇಂಬರ್ ಕರೆದಿದ್ದ ಸಭೆಯಲ್ಲಿ ನಿರ್ಮಾಪಕ, ವಿತರಕ ಜಯಣ್ಣ, ನಿರ್ಮಾಪಕ, ನಿರ್ದೇಶಕ ಆರ್ ಚಂದ್ರು, ಕೆ ಮಂಜು, ಹೊಂಬಾಳೆ ನಿರ್ಮಾಣ ಸಂಸ್ಥೆಯ ಪ್ರತಿನಿಧಿ ಚಿದಾನಂದ್, ನಿರ್ಮಾಪಕ ತರುಣ್ ಶಿವಪ್ಪ, ಲಹರಿ ವೇಲು, ಕೆಪಿ ಶ್ರೀಕಾಂತ್ ಇನ್ನೂ ಕೆಲವರು ಭಾಗಿಯಾಗಿದ್ದರು. ಫಿಲಂ ಚೇಂಬರ್ನ ಅಧ್ಯಕ್ಷ ಎನ್.ಎಮ್.ಸುರೇಶ್ ಸೇರಿದಂತೆ ಇನ್ನೂ ಕೆಲವರು ಭಾಗಿಯಾಗಿದ್ದರು.
ಈ ಸಭೆಯ ಬಳಿಕ ನಿರ್ಧಾರ ಪ್ರಕಟಿಸಿದ ಫಿಲಂ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್, ‘ಕನ್ನಡ ಚಿತ್ರರಂಗ ಹಾಗೂ ಚಿತ್ರಮಂದಿರಗಳ ಬಂದ್ ಮಾಡುವುದಿಲ್ಲ’ ಎಂದರು. ‘ಚಿತ್ರಮಂದಿರಗಳ ಸಮಸ್ಯೆ ಹಾಗೂ ಚಿತ್ರರಂಗದ ಸಮಸ್ಯೆ ಬಗ್ಗೆ ಕುಲಂಕುಶವಾಗಿ ಚರ್ಚೆ ನಡೆಯಿತು. ಹಲವು ನಿರ್ಮಾಪಕರು ಸಭೆಯಲ್ಲಿ ಭಾಗಿಯಾಗಿದ್ದರು. ಚಿತ್ರಮಂದಿರಗಳನ್ನು ಬಂದ್ ಮಾಡುತ್ತೀವಿ ಎಂದು ಈ ಹಿಂದೆಯೂ ನಾವು ಹೇಳಿರಲಿಲ್ಲ. ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದೆವು, ಪ್ರದರ್ಶಕರನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನುವ ಬಗ್ಗೆ ಚರ್ಚೆಯಾಯಿತು. ಈ ಸೂಕ್ಷ್ಮ ವಿಚಾರದ ಬಗ್ಗೆ ಸರ್ಕಾರದ ಜೊತೆ ಚರ್ಚೆ ಮಾಡ್ತಿವಿ’ ಎಂದರು. ಇನ್ನೂ ವರ್ಷಕ್ಕೆ 2 ಸಿನಿಮಾ ಮಾಡುವಂತೆ ಸ್ಟಾರ್ ಗಳಿಗೆ
ಫಿಲಂ ಚೇಂಬರ್ ಮನವಿ ಮಾಡಲಿದ್ದಾರೆ.