ಸಮಗ್ರ ನ್ಯೂಸ್: ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಖಾಡಕ್ಕಿಳಿದಿದ್ದ ಕಾಮಿಡಿಯನ್ ಶ್ಯಾಮ್ ರಂಗೀಲಾ ಅವರ ನಾಮಪತ್ರ ತಿರಸ್ಕøತಗೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ಯಾಮ್ ರಂಗೀಲಾ, ವಿನಾ ಕಾರಣ ನಾಮಪತ್ರವನ್ನು ತಿರಸ್ಕಾರ ಮಾಡಲಾಗಿದೆ. ಇದು ನಿರೀಕ್ಷಿತ ಎಂದು ಆರೋಪಿಸಿದ್ದಾರೆ.
ಮೋದಿ, ರಾಹುಲ್ ಗಾಂಧಿ ಸೇರಿದಂತೆ ಹಲವರ ಧ್ವನಿ ಅನುಕರಿಸಿ ಭಾರಿ ಜನಪ್ರಿಯತೆ ಗಳಿಸಿರುವ ಶ್ಯಾಮ್ ರಂಗೀಲಾ ಈ ಬಾರಿ ಮೋದಿ ವಿರುದ್ಧವೇ ತೊಡೆ ತಟ್ಟಿದ್ದರು. ವಿಪಕ್ಷಗಳ ನಾಯಕರು, ಇಂಡಿಯಾ ಒಕ್ಕೂಟ ಬೆಂಬಲಿತ ನಾಯಕರೂ ಶ್ಯಾಮ್ ರಂಗೀಲಾಗೆ ಭಾರಿ ಬೆಂಬಲ ನೀಡಿದ್ದರು. ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಶ್ಯಾಮ್ ರಂಗೀಲಾ ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದರು. ಆದ್ರೆ ನಾಮಪತ್ರ ಪರೀಶೀಲನೆ ನಡೆಸಿದ ಚುನಾವಣಾ ಆಯೋಗ ಅಧಿಕಾರಿಗಳು, ಶ್ಯಾಮ್ ರಂಗೀಲಾ ನಾಪತ್ರ ತಿರಸ್ಕರಿಸಿದ್ದಾರೆ. ನಾಮ ಪತ್ರ ಸಲ್ಲಿಕೆ ವೇಳೆ ಪ್ರಮಾಣವಚನ ಸ್ವೀಕರಿಸಿಲ್ಲ ಎಂದು ಆಯೋಗ ಅಧಿಕಾರಿಗಳು ಹೇಳಿದ್ದಾರೆ.
ನಾನು ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸುತ್ತಿದ್ದೇನೆ. ಎಲ್ಲಾ ದಾಖಲೆ ಪತ್ರಗಳನ್ನು ನೀಡಿದ್ದೇನೆ. ನಾಮಪತ್ರ ಸ್ವೀಕರಿಸುವ ವೇಳೆ ಯಾವುದೇ ಸೂಚನೆ ನೀಡಲಿಲ್ಲ. ಇದೀಗ ಸಮಯ ಮುಗಿದ ಬಳಿಕ ನಾಮಪತ್ರ ತಿರಸ್ಕರಿಸಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ. ಈ ರೀತಿಯ ಸಮಸ್ಯೆಗಳು ಎದುರಾಗಲಿದೆ ಅನ್ನೋ ಸೂಚನೆ ನನಗೆ ನೀಡಿದ್ದರು. ಆದರೆ ನಾನು ಮತದಾನದ ವೇಳೆ, ಮತದಾನದ ಬಳಿಕ ಸಮಸ್ಯೆ ಎದುರಾಗಲಿದೆ ಎಂದು ಊಹಿಸಿದ್ದೆ. ಆದರೆ ನಾಮಪತ್ರವನ್ನೇ ತಿರಸ್ಕರಿಸಿದ್ದಾರೆ ಎಂದು ಶ್ಯಾಮ್ ರಂಗೀಲಾ ಹೇಳಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಮಿಮಿಕ್ರಿ ಮೂಲಕ ದೇಶವ್ಯಾಪಿ ಪ್ರಖ್ಯಾತರಾಗಿದ್ದ ಕಲಾವಿದ ಶ್ಯಾಂ ರಂಗೀಲಾ, ಈ ಬಾರಿ ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಇಂದಿನ ರಾಜಕಾರಣವೂ ಸಹ ಹಾಸ್ಯಮಯವಾಗಿರುವುದೇ ನನ್ನ ಈ ನಿರ್ಧಾರಕ್ಕೆ ಕಾರಣ. ಸೂರತ್ ಮತ್ತು ಇಂದೋರ್‍ನಲ್ಲಿ ನಡೆದ ರಾಜಕೀಯ ಪ್ರಹಸನದಿಂದಾಗಿ ಜನರಿಗೆ ಆಯ್ಕೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ವಾರಾಣಸಿ ಜನರಿಗೆ ಆಯ್ಕೆ ನೀಡುವ ಸಲುವಾಗಿ ಪ್ರಧಾನಿಯ ವಿರುದ್ಧ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ಶ್ಯಾಮ್ ರಂಗೀಲಾ ಹೇಳಿದ್ದರು.