ಸಮಗ್ರ ನ್ಯೂಸ್: ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಮತ್ತಿಬ್ಬರು ಆಪ್ತರ ಹೋಟೆಲ್ ಹಾಗೂ ಬಾರ್ ಮೇಲೆ ಎಸ್‌ಐಟಿ ದಾಳಿ ನಡೆಸಿದೆ. ಕ್ವಾಲಿಟಿ ಬಾರ್ ಶರತ್ ಒಡೆತನದ ಬಾರ್ ಹಾಗೂ ಕಿರಣ್ ಒಡೆತನದ ಹೋಟೆಲ್ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿದೆ.
ಹಾಸನದ ಬಿ.ಎಂ. ರಸ್ತೆಯಲ್ಲಿರುವ ಕ್ವಾಲಿಟಿ ಬಾರ್ ಹಾಗೂ ಹೋಟೆಲ್ ಶ್ರೀಕೃಷ್ಣ ಮೇಲೆ ಎಸ್‌ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಪೆನ್‌ಡ್ರೈವ್ ಹಂಚಿಕೆ ಆರೋಪದಲ್ಲಿ ಕ್ವಾಲಿಟಿ ಬಾರ್ ಶರತ್ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಏ.21ರಂದು ಶರತ್ ವಿರುದ್ಧ ಜೆಡಿಎಸ್ ಮುಖಂಡರು ದೂರು ನೀಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗೆ ಶರತ್ ಅರ್ಜಿ ಸಲ್ಲಿಸಿದ್ದರು. ಇನ್ನು ಕಿರಣ್ ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಮೇ 12ರಂದು ರಂದು ಪೆನ್‌ಡ್ರೈವ್ ಹಂಚಿಕೆ ಆರೋಪದಲ್ಲಿ ಲಿಖಿತ್ ಗೌಡ ಹಾಗೂ ಚೇತನ್ ಎಂಬುವರರನ್ನು ಎಸ್‌ಐಟಿ ಬಂಧಿಸಿತ್ತು. ಇವರು ಕೂಡ ಪ್ರೀತಂ ಗೌಡ ಅವರ ಆಪ್ತರಾಗಿದ್ದು, ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವರಿಗೆ ಜಾಮೀನು ನೀಡಲು ಹಾಸನದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಇಂದು ನಿರಾಕರಿಸಿದೆ.