ಸಮಗ್ರ ನ್ಯೂಸ್: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಆಸ್ಪತ್ರೆಯಿಂದ ಮರಳುತ್ತಿದ್ದಂತೆ ಆತನನ್ನು ಕಂಡು ಪರಿಚಿತ ಪಶು ವೈದ್ಯಾಧಿಕಾರಿಯೊಬ್ಬರು ಬೆನ್ನುತಟ್ಟಿ ವಿಚಾರಿಸಿದ್ದು, ಇದೇ ವೇಳೆ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಜೋಡುಮಾರ್ಗ ಸರ್ಕಲ್ ನಲ್ಲಿ ಸೋಮವಾರ ಸಂಜೆ ನಡೆದಿದೆ. ಆರೋಪಿ ಡಾಕ್ಟರ್ ಕುಮಾರ್ ನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಕೊಕ್ಕಡ ಗ್ರಾಮದ ಕೃಷ್ಣ ಯಾನೆ ಕಿಟ್ಟ (58) ಮೃತ ದುರ್ದೈವಿ. ಕೊಕ್ಕಡದ ಸ್ಥಳೀಯ ನಿವಾಸಿ ಮೃತ ಕೃಷ್ಣ ಅವರು ವಿಪರೀತ ಜ್ವರ ಇದ್ದ ಕಾರಣ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ ಸೋಮವಾರ ಡಿಸ್ಚಾರ್ಜ್ ಮಾಡಿಕೊಂಡು ಬಸ್ಸಿನಲ್ಲಿ ಕೊಕ್ಕಡಕ್ಕೆ ಮೇ.13 ರಂದು ಸಂಜೆ 7 ಗಂಟೆಗೆ ಬಂದಿಳಿದಿದ್ದಾರೆ. ಇದೇ ವೇಳೆ ತನ್ನ ಬಹಳ ಆಪ್ತರು, ಪರಿಚಿತರೇ ಆದ ಕೊಕ್ಕಡದ ಪಶು ವೈದ್ಯ ಡಾ.ಕುಮಾರ್ ಅವರು ಕೃಷ್ಣ ಅವರಲ್ಲಿ ಮಾತನಾಡುತ್ತ ಜ್ವರ ಇದ್ದು ಇಷ್ಟು ಬೇಗ ಡಿಸ್ಚಾರ್ಜ್ ಆಗಿ ಯಾಕೆ ಬಂದೆ, ಆರೋಗ್ಯ ಸುಧಾರಿಸಿ ಬರಬೇಕಿತ್ತು ಎಂದು ಬುದ್ದಿ ಮಾತು ಹೇಳಿ ಒಂದು ಏಟು ಹೊಡೆದಿದ್ದಾರೆ ಎನ್ನಲಾಗಿದೆ. ಪಶು ವೈದ್ಯರು ಹೊಡೆದ ರಭಸಕ್ಕೆ ಕೃಷ್ಣರವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಸ್ವಲ್ಪದರಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವೈದ್ಯರು ಹೊಡೆದ ಕಾರಣಕ್ಕೋ ಅಥವಾ ಜ್ವರದಿಂದ ಬಳಲಿ ಕೃಷ್ಣ ಅವರು ಸಾವನ್ನಪ್ಪಿದ್ದಾರೆಯೇ ಅಥವಾ ಇನ್ನಾವುದೋ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ. ಮೃತಪಟ್ಟ ಕೃಷ್ಣ ಅವರ ಪತ್ನಿ ಭಾರತಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಡಾಕ್ಟರ್ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾಧಿಕಾರಿ ಸಮರ್ಥ್ ಮತ್ತು ಅವರ ತಂಡ ಆಗಮಿಸಿ ತನಿಖೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟಾರೆ ಪ್ರಕರಣದಿಂದಾಗಿ ಪಶುವೈದ್ಯರು ಕಂಬಿ ಎಣಿಸುವಂತಾಗಿದೆ.