ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯ ಗಚ್ಚಿನಗಕಟ್ಟಿ ಕಾಲೋನಿಯಿಂದ ನಿನ್ನೆ ನಾಪತ್ತೆಯಾಗಿದ್ದ ಮೂವರು ಮಕ್ಕಳು ಇಂದು ಶವವಾಗಿ ಪತ್ತೆಯಾಗಿದ್ದಾರೆ. ಅನುಷ್ಕಾ, ವಿಜಯ ಹಾಗೂ ಮಿಹಿರ ಮೃತ ದುರ್ದೈವಿಗಳು.

ಇವರೆಲ್ಲ ಮನೆ ಮುಂದೆ ಆಟವಾಡುತ್ತಿದ್ದಾಗ ಕಾಲೋನಿಯಲ್ಲಿ ಒಂಟೆ ಬಂದಿತ್ತು. ಮೂವರು ಖುಷಿಯಲ್ಲಿ ಅದರ ಹಿಂದೆ ಹೋಗಿದ್ದಾರೆ. ಹೀಗೆ ಹೋದವರು ಮನೆಗೆ ವಾಪಸ್ ಆಗಿರಲಿಲ್ಲ. ಪೋಷಕರು ಸಹ ಮನೆ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಆದರೆ ಮಕ್ಕಳ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಮಕ್ಕಳು ಕಾಣಿಯಾಗಿದ್ದಕ್ಕೆ ಕಂಗಾಲಾದ ಪೋಷಕರು ಎಪಿಎಂಸಿ ಠಾಣೆ ಮೆಟ್ಟಿಲು ಹತ್ತಿದ್ದರು. ವಿಜಯಪುರದ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಿಳಿದ ಪೊಲೀಸರು ಸಿಸಿಟಿವಿಯಲ್ಲಿ ಮಕ್ಕಳ ಚಲನವಲನ ಗಮನಿಸಿ ಹುಡುಕಾಟ ಶುರು ಮಾಡಿದ್ದರು. ಸಿಸಿಟಿವಿಯಲ್ಲಿ ಮಕ್ಕಳು ಹೋಗುವುದು ಸೆರೆಯಾಗಿತ್ತು.
ಇಂದು ಶಾಂತಿನಿಕೇತನ ನಗರದ ಚರಂಡಿ ಶುದ್ಧೀಕರಣ ಕೇಂದ್ರದಲ್ಲಿ ಬಿದ್ದು ಮೂವರು ಮಕ್ಕಳು ಮೃತಪಟ್ಟಿವೆ. ಸೂಕ್ತ ಭದ್ರತೆ ಇಲ್ಲದ ಕಾರಣ ನಮ್ಮ ಮಕ್ಕಳು ಬಿದ್ದು ಸಾವನಪ್ಪಿದ್ದಾರೆ ಎಂದು ಕುಟುಂಬಸ್ಥರ ಆಕ್ರೋಶ ಹೊರಹಾಕಿದ್ದಾರೆ. ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರು ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.