ಸಮಗ್ರ ನ್ಯೂಸ್: ಅತ್ತ ಕೊಡಗಿನಿಂದ ಬರ್ಬರ ಕೃತ್ಯವೊಂದು ನಾಡನ್ನು ಬೆಚ್ಚಿ ಬೇಳಿಸಿತು. ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದ ಸಂಭ್ರಮದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳನ್ನು ದುಷ್ಕರ್ಮಿಯೊಬ್ಬ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ. ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯ ಕುಂಬಾರ ಗಡಿಗೆ ಎಂಬಲ್ಲಿ ಈ ಕೃತ್ಯ ನಡೆದಿತ್ತು. ಕೊಲೆಯ ಭೀಕರತೆಯೇ, ಆರೋಪಿ ಸೈಕೋಪಾತ್ ಎನ್ನುವುದನ್ನು ಹೇಳುತ್ತಿತ್ತು. ಬಂಧಿತ ಆರೋಪಿ ಪ್ರಕಾಶ್, ವಿದ್ಯಾರ್ಥಿನಿಯ ತಲೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಸಂತ್ರಸ್ತೆಯ ರುಂಡವನ್ನು ಆಕೆಯ ನಿವಾಸದಿಂದ ಸುಮಾರು 100 ಮೀಟರ್ ದೂರದ ಕಾಡಿನ ನಡುವೆ ಪತ್ತೆ ಮಾಡಲಾಗಿದೆ. ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರಂಭದಲ್ಲಿ ವದಂತಿ ಹಬ್ಬಿತ್ತು. ಆದರೆ ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನು ಒಂದು ಬರ್ಬರ ಅಪರಾಧ ಪ್ರಕರಣವಾಗಿಯಷ್ಟೇ ನೋಡುವಂತಿಲ್ಲ. ಇದು ಬರೀ ಕೊಲೆಯಲ್ಲ.. ಬಹುಶಃ ಕೊಲೆ ಮಾಡಿದವನು ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದು ಕೊಲೆಯಾದವಳು ಇನ್ನೊಂದು ಧರ್ಮಕ್ಕೆ ಸೇರಿದ್ದಿದ್ದರೆ ಈ ಕೃತ್ಯ ರಾಜಕೀಯ ತಿರುವು ಪಡೆದುಕೊಳ್ಳುತ್ತಿತ್ತು. ಕೊಲೆಯಾದ ವಿದ್ಯಾರ್ಥಿನಿಯ ಮನೆಗೆ ರಾಜಕಾರಣಿಗಳ ದಂಡು ಭೇಟಿ ನೀಡುತ್ತಿತ್ತು. ಬೀದಿಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು ಮಾತ್ರವಲ್ಲ, ಇಡೀ ಕೊಲೆಗೆ ಕೊಲೆಗಾರ ಪ್ರತಿನಿಧಿಸುವ ಸಮುದಾಯವನ್ನೇ ಹೊಣೆ ಮಾಡಲಾಗುತ್ತಿತ್ತು. ಕೊಡಗು ಜಿಲ್ಲೆ ಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿತ್ತು. ಕೊಲೆ ಮಾಡಿದವನು ಆಕೆಯ ಸಮುದಾಯಕ್ಕೇ ಸೇರಿದ ಕಾರಣದಿಂದಾಗಿ ರಾಜಕಾರಣಿಗಳಿಗೆ ಈ ಕೊಲೆ ಆಘಾತಕಾರಿ ಅನ್ನಿಸಲಿಲ್ಲ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದೂ ಅನ್ನಿಸಿಲ್ಲ. ಯಾವುದೇ ಮಹಿಳಾ ಆಯೋಗದ ತಂಡ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನವನ್ನು ಹೇಳಿಲ್ಲ. ಇದು ಅತ್ಯಂತ ವಿಷಾದನೀಯವಾಗಿದೆ. ತಮ್ಮ ರಾಜಕೀಯ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಗೆ ಸಮಾಜವೇ ಕೊಲೆಗಾರ ಮನಸ್ಥಿತಿಯನ್ನು ಪೋಷಿಸುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿಯ ಕೊಲೆಗೂ ಇದಕ್ಕೂ ದೊಡ್ಡ ವ್ಯತ್ಯಾಸವಿಲ್ಲವಾದರೂ ಬರ್ಬರತೆಯಲ್ಲಿ ಹುಬ್ಬಳ್ಳಿಯ ಕೃತ್ಯವನ್ನು ಹಲವು ಪಟ್ಟು ಮೀರಿಸುತ್ತಿದೆ. ಇದು ಪ್ರೇಮ ಪ್ರಕರಣದ ಕಾರಣದಿಂದ ನಡೆದಿರುವ ಕೊಲೆಯಲ್ಲ. ಇಲ್ಲಿ ಕೊಲೆಗಾರನಿಗೆ ವಿದ್ಯಾರ್ಥಿನಿಯನ್ನು ಮದುವೆ ಮಾಡಿಕೊಡುವ ನಿರ್ಧಾರಕ್ಕೆ ಕುಟುಂಬಸ್ಥರು ಬಂದಿದ್ದರು. ಆದರೆ ಇದು ಸಮಾಜ ಕಲ್ಯಾಣ ಇಲಾಖೆಗೆ ತಿಳಿದು ಅಧಿಕಾರಿಗಳು ಮಧ್ಯಪ್ರವೇಶಿಸಿ ‘ಬಾಲ್ಯ ವಿವಾಹ’ ಎನ್ನುವ ಕಾರಣಕ್ಕಾಗಿ ಮದುವೆಯನ್ನು ತಡೆದರು. ಇಲ್ಲವಾದರೆ ಕೊಲೆಗಾರನ ಜೊತೆಗೆ ಆ ವಿದ್ಯಾರ್ಥಿನಿ ಮದುವೆಯಾಗಿ ಜೀವನ ಪೂರ್ತಿ ಏಗಬೇಕಾಗಿತ್ತು. ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಈ ಸೈಕೋಪಾತ್‌ಗೆ ವಿವಾಹ ಮಾಡಿಸಿಕೊಡುವುದು ಯಾವ ಕೊಲೆಗಿಂತಲೂ ಕಡಿಮೆಯೇನೂ ಅಲ್ಲ. ಮದುವೆಯಾಗಿದ್ದರೆ ಈತನ ಜೊತೆಗೆ ಆಕೆ ಜೀವಚ್ಛವವಾಗಿ ಬದುಕಬೇಕಾಗಿತ್ತೇನೋ? ಈ ಮೂಲಕ, ಇನ್ನೂ ಹೇಗೆ ಗ್ರಾಮಾಂತರ ಪ್ರದೇಶದಲ್ಲಿ ಬಾಲ್ಯ ವಿವಾಹ ಜೀವಂತವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.
ಇನ್ನೊಂದು ಪ್ರಮುಖ ವಿಚಾರವೆಂದರೆ ಈ ಎರಡೂ ಕೊಲೆಗಳೂ ಅತೀ ಭೀಕರ. ಆದರೆ ನೇಹಾಳ ಸಾವಿಗೆ ಸಿಕ್ಕ ಮಹತ್ವ ಮೀನಾಳ ಸಾವಿಗೆ ಸಿಕ್ಕಿಲ್ಲ. ಕಾರಣ ಇಷ್ಟೇ… ಇದರಲ್ಲಿ ಸಮಾಜದ ನಡುವೆ ಶಾಂತಿ ಕೆದಕುವ ವಸ್ತು ಸಿಗುತ್ತಿಲ್ಲ. ಕೊಲೆ ಮಾಡಿದ ಸೈಕೋಪಾತ್ ಕೊಲೆಯಾದ ಮೀನಾಳ ಸಮುದಾಯದವನು. ಇದರಿಂದಾಗಿ ರಾಜಕೀಯ ಬೇಳೆ ಬೇಯೋದು ಕಡಿಮೆ. ತಮ್ಮದೇ ಸಮುದಾಯದಿಂದ ಯಾರೂ ಕೊಲೆಯಾದರೂ ಆ ಸಾವಿಗೆ ನ್ಯಾಯ , ಮಹತ್ವ ಅಷ್ಟಕಷ್ಟೇ. ಸೌಜನ್ಯಕ್ಕಾದರೂ ಮೀನಾಳ ಮನೆಗೆ ಭೇಟಿ ನೀಡದ ಹಲವು ರಾಜಕೀಯ ನಾಯಕರ ಗೋಮುಖ ವ್ಯಾಘ್ರತನ ಈ ಪ್ರಕರಣದಲ್ಲಿ ಬಯಲಾಗಿದೆ.
ಕೊಲೆಯಾದವಳು ಒಬ್ಬ ಹೆಣ್ಣುಮಗಳು. ಕೊಲೆ ಮಾಡಿದಾತ ಕೊಲೆಗಾರನೇ ಹೊರತು ಆತ ಹಿಂದೂ ಕೊಲೆಗಾರ, ಮುಸ್ಲಿಂ ಕೊಲೆಗಾರ ಎಂಬ ವಿಭಾಗ ಮಾಡುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಇದು ಮುಂದಿನ ಪೀಳಿಗೆಗೆ ಮಾರಕ. ಯಾವುದೇ ಹೆಣ್ಮಗು ಕೊಲೆಯಾದರೂ ಅದನ್ನು ಪ್ರಶ್ನಿಸುವ ಗುಣ ನಾಗರಿಕ ಸಮಾಜದಲ್ಲಿ ಹುಟ್ಟಿದಾಗಲಷ್ಟೇ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಇಲ್ಲವಾದಲ್ಲಿ ಕತ್ತಿಯಿಂದ ಕತ್ತರಿಸುವವರು, ರುಂಡ ಚೆಂಡಾಡುವವರು, ಪ್ರಿಡ್ಜ್ ನಲ್ಲಿ ಮಾಂಸ ಪೇರಿಸುವವರು ಹುಟ್ಟುತ್ತಲೇ ಇರುತ್ತಾರೆ. ಇಂದು ಆ ಹೆಣ್ಣು ಮಕ್ಕಳಿಗಾದ ಪರಿಸ್ಥಿತಿ ಮುಂದೆ ನಮ್ಮ ಮನೆಯಲ್ಲೂ ನಡೆದರೆ ಅಚ್ಚರಿಯಿಲ್ಲ. ಯಾಕೆಂದರೆ ಈಗ ಕೊಲೆಯಾಗಿರುವವರು ನಮ್ಮನೆ ಮಕ್ಕಳೇ..!