Ad Widget .

ಕಡಬ: ಕುಮಾರಧಾರ ಒಡಲಲ್ಲಿ ಅಕ್ರಮ ಮರಳುಗಾರಿಕೆ| ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಸೇರಿ‌ ಇಬ್ಬರ ಮೇಲೆ ಎಫ್ಐಆರ್| ಉದ್ದೇಶ ಪೂರ್ವಕ ಕೇಸು ದಾಖಲು ಎಂದ ಮರಳು ವ್ಯಾಪಾರಸ್ಥರ ಸಂಘ

ಸಮಗ್ರ ನ್ಯೂಸ್: ಕುಮಾರಧಾರ ನದಿಯಲ್ಲಿ ಮರಳು ಕಳ್ಳತನ ನಡೆಸುತ್ತಿದ್ದ ಬೃಹತ್ ಜಾಲವೊಂದನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮೇ 7 ರಂದು ಬೇಧಿಸಿದ್ದಾರೆ. ಜಿಲ್ಲೆಯ ಪ್ರತಿಷ್ಟಿತ ಜನ ಪ್ರತಿನಿಧಿಯೊಬ್ಬರ ಕೃಪಕಟಾಕ್ಷದಲ್ಲಿ ಬಿಜೆಪಿಯ ಪ್ರಭಾವಿ ನಾಯಕರೊಬ್ಬರ ನೇತೃತ್ವದಲ್ಲಿ ಕಡಬದ ಕುದ್ಮಾರಿನಲ್ಲಿ ಈ ಬೃಹತ್ ಮರಳು ದಂಧೆ ಕಳೆದ ಹಲವಾರು ಸಮಯದಿಂದ ಎಗ್ಗಿಲ್ಲದೆ ನಡೆಯುತಿತ್ತು. ಈ ಬಗ್ಗೆ ಹಲವು ಬಾರಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.

Ad Widget . Ad Widget .

ಪುತ್ತೂರು ಎಪಿಎಂಸಿಯ ಮಾಜಿ ಅಧ್ಯಕ್ಷ ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡ ದಿನೇಶ್ ಮೆದು ಈ ಮರಳು ಮಾಫಿಯಾದ ಕಿಂಗ್ ಪಿನ್ ಎನ್ನಲಾಗುತ್ತಿದ್ದು ದಾಳಿಯ ಬಳಿಕ ಇವರ ವಿರುದ್ದ ಪೊಲೀಸರು ಹಲವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ಚೆನ್ನಪ್ಪ ಗೌಡ ಎಂಬಾತನೂ ಅಕ್ರಮ ಮರಳುಗಾರಿಕೆಗೆ ಸಹಕಾರ ನೀಡಿದ್ದು ಆತನ ವಿರುದ್ದವೂ ಹಲವು ಪ್ರಕರಣಗಳು ದಾಖಲಾಗಿವೆ. ಇವರಿಬ್ಬರ ವಿರುದ್ದ ಒಟ್ಟು 6 ಪ್ರಕರಣಗಳು ದಾಖಲಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Ad Widget . Ad Widget .

ಕಡಬ ತಾಲೂಕಿನ ಕುದ್ಮಾರಿನಲ್ಲಿರುವ ಶಾಂತಿಮೊಗೇರು ಸೇತುವೆ ಬಳಿ ಈ ಅಕ್ರಮ ಮರಳು ಅಡ್ಡೆ ಕಾರ್ಯಾಚರಿಸುತಿತ್ತು. ಸ್ಥಳೀಯ ನಿವಾಸಿ ಚೆನ್ನಪ್ಪ ಗೌಡ ಎಂಬವರ ಜಮೀನು ಈ ಅಡ್ಡೆಯ ಪಕ್ಕದಲ್ಲಿದ್ದು ಈ ಜಮೀನಿನ ಮೂಲಕ ಆತ ಮರಳು ಸಾಗಾಟಕ್ಕೆ ಅವಕಾಶ ನೀಡುತ್ತಿದ್ದ. ಅಲ್ಲದೇ ಈ ಮರಳು ದಂಧೆಯಲ್ಲೂ ಆತನೂ ಪ್ರಮುಖ ಪಾತ್ರಧಾರಿ ಎನ್ನುವುದು ಸ್ಥಳೀಯರ ಆರೋಪ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜಾಣ ಮೌನದ ರೂಪದಲ್ಲಿ ದಂಧೆಕೋರರಿಗೆ ಸಿಗುತ್ತಿದ್ದ ಸಹಕಾರದಿಂದಲೇ ಇಲ್ಲಿ ಕಳೆದ ಹಲವಾರು ವರ್ಷಗಳಿಂದ ಮರಳು ದಂಧೆ ರಾಜರೋಷವಾಗಿ ನಡೆಯುತಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಬುಧವಾರ ತಡ ರಾತ್ರಿ ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಹಲವಾರು ಟಿಪ್ಪರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ದಾಳಿಯ ವೇಳೆ ಮರಳು ರ್ಯಾಂಪ್ ನಲ್ಲಿ 10ಕ್ಕೂ ಹೆಚ್ಚು ಟಿಪ್ಪರ್ ಗಳು ಮರಳು ಸಾಗಿಸಲು ಅಲ್ಲಿ ಬಂದಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಆದರೆ ಪೊಲೀಸರಿಗೆ ಮರಳು ತುಂಬಿದ್ದ 5 ರಿಂದ 6 ಲಾರಿಗಳು ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯ ವೇಳೆ ಲಕ್ಷಾಂತರ ಮೌಲ್ಯದ ಮರಳು ಹಾಗೂ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ದಾಳಿ ವೇಳೆ ಓಡಿ ಬಚಾವಾಗಲು ಯತ್ನಿಸಿ ದಿನೇಶ್ ಕೈ ಮುರಿದುಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಲ್ಲಿಂದಲೇ ನಿರೀಕ್ಷಣಾ ಜಾಮೀನಿಗೆ ಪ್ರಯತ್ನ‌ ನಡೆಸಿರುವುದಾಗಿಯೂ ತಿಳಿದುಬಂದಿದೆ.

ಈ ನಡುವೆ ಪ್ರಕರಣದಲ್ಲಿ ಸಂಘದ ಅಧ್ಯಕ್ಷ ದಿನೇಶ್ ಮೆದು ಅವರ ಹೆಸರನ್ನು ಉದ್ದೇಶ ಪೂರ್ವಕವಾಗಿ,ರಾಜಕೀಯ ಒತ್ತಡಕ್ಕೆ ಮಣಿದು ಸೇರಿಸಿ ದೂರು ದಾಖಲಿಸಿದ್ದಾರೆ. ಇದು ಖಂಡನೀಯ. ದ.ಕ.ಜಿಲ್ಲೆಯಲ್ಲಿ ಮರಳುಗಾರಿಕೆ ಮಾಡಲು ಸರಕಾರಕ್ಕೆ ರಾಜಧನ ಪಾವತಿಸಿ ಮರಳುಗಾರಿಕೆ ಮಾಡುವವರ ಸಂಘದ ಅಧ್ಯಕ್ಷರಾಗಿ ದಿನೇಶ್‌ ಮೆದು ಅವರು ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆ ಅಧಿಕೃತವಾಗಿ ಮರಳುಗಾರಿಕೆ ಮಾಡುವವರಿಗೆ ಹಿನ್ನಡೆ ಉಂಟು ಮಾಡುವ ಕೃತ್ಯವಾಗಿದೆ. ದಿನೇಶ್ ಮೆದು ಅವರು ಸಂಘದ ಅಧ್ಯಕ್ಷರಾಗಿ ಸಲಹೆ, ಸಹಕಾರ ನೀಡುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ, ಉಪಾಧ್ಯಕ್ಷ ಚರಣ್ ಜುಮಾದಿಗುಡ್ಡೆ,ಕೋಶಾಧಿಕಾರಿ ಸುರೇಶ್ ಕುಂಡಡ್ಕ, ಪದಾಧಿಕಾರಿಗಳಾದ ಮೋನು ಪಿಲಿಗೂಡು, ಪಿ.ಪಿ ಎಲಿಯಾಸ್ ಕಡಬ, ಪ್ರವೀಣ್‌ ಆಳ್ವ ಮಂಗಳೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *