ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರದ ವಾಟದಹೊಸಳ್ಳಿ ಕೆರೆಯಲ್ಲಿ ಈಜಲು ಹೋದ ಟೆಕ್ಕಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ವಿನಯ್ ರಮೇಶ್ (42) ಮೃತ ಪಟ್ಟವರು. ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆಯಿಂದ ಇಂದು ಟೆಕ್ಕಿ ಮೃತದೇಹವು ಪತ್ತೆಯಾಗಿದೆ.
ಬೆಂಗಳೂರಿನ ಇಂದಿರಾನಗರ ನಿವಾಸಿಯಾದ ವಿನಯ್ ರಮೇಶ್, ಐದು ಜನ ಸ್ನೇಹಿತರೊಟ್ಟಿಗೆ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಕೆಲವರು ಈ ದಡದಿಂದ ಆ ದಡಕ್ಕೆ ಯಾರು ಮೊದಲು ಈಜಿಕೊಂಡು ಬರುತ್ತಾರೆ ನೋಡೋಣಾ ಎಂದು ಸವಾಲು ಹಾಕಿಕೊಂಡಿದ್ದಾರೆ. ಈ ಚಾಲೆಂಜ್ ಅನ್ನು ಸ್ವೀಕರಿಸಿದ ರಮೇಶ್ ಜೋಶ್‌ನಲ್ಲಿ ನೀರಿಗೆ ಇಳಿದಿದ್ದಾರೆ. ಆದರೆ ವಿನಯ್ ರಮೇಶ್ ವಾಪಸ್ ಬಂದಿರಲಿಲ್ಲ.
ಹೀಗಾಗಿ ಜತೆಗೆ ಇದ್ದ ಸ್ನೇಹಿತರು ಗಾಬರಿಯಾಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ವಿನಯ್ ರಮೇಶ್ ವಿಮಾನದಲ್ಲಿ ಚೆನ್ನೈ ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ನೇರವಾಗಿ ಸ್ನೇಹಿತರೊಟ್ಟಿಗೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ನಿರಂತರ ಪ್ರಯಾಣದಿಂದ ಬಳಲಿದ್ದ ವಿನಯ್ ಈಜಲು ಕೆರೆಗೆ ಇಳಿದಾಗ ಸುಸ್ತಾಗಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.