ಸಮಗ್ರ ನ್ಯೂಸ್ : ಆನ್ ಲೈನ್ ಮೂಲಕ ವಿವಿಧ ರೀತಿಯಲ್ಲಿ ವಂಚಿಸಿ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದ ನಯ ವಂಚಕ ದಂಧೆಕೋರರಿಗೆ ಗ್ರಾಹಕರ ಬದಲಿ ಸಿಮ್ ಗಳನ್ನು ಸರಬರಾಜು ಮಾಡುತ್ತಿದ್ದ ಮಡಿಕೇರಿಯ ಜಿಯೋ ಸಿಮ್ ಡಿಸ್ಟ್ರಿಬ್ಯೂಟರ್ ಓರ್ವನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ರೋಷನ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. 2018ರಿಂದ 2023ರ ವರೆಗೆ ಏರ್ ಟೆಲ್ ಸಿಮ್ ಡಿಸ್ಟ್ರಿಬ್ಯುಟರ್ ಆಗಿದ್ದ ಈತ ನಂತರ ಜಿಯೋ ಸಿಮ್ ಡಿಸ್ಟ್ರಿಬ್ಯೂಟರ್ ಆಗಿದ್ದಾನೆ.
ವಂಚನೆ ಬೆಳಕಿಗೆ ಬಂದಿದ್ದು ಹೇಗೆ?
ಇತ್ತೀಚಿಗೆ ಕೇರಳದ ವ್ಯಕ್ತಿಯೊಬ್ಬರು ಆನ್ ಲೈನ್ ವಂಚಕರಿಂದ ಬರೋಬರಿ 1 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದರು. ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಾಗ ಮಡಿಕೇರಿಯ ಜಿಯೋ ಸಿಮ್ ಡಿಸ್ಟ್ರಿಬ್ಯೂಟರ್ ಅಬ್ದುಲ್ ರೋಷನ್ ಅಲ್ಲಿನ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈತನಿಂದ ಸಾವಿರಾರು ಸಂಖ್ಯೆಯ ಸಿಮ್ ಗಳು ಸೇರಿದಂತೆ 150 ಚೈನಾ ಮೇಡ್ ಮೊಬೈಲ್ ಮತ್ತು ಆರು ಬಯೋಮೆಟ್ರಿಕ್ ಸ್ಕ್ಯಾನರ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ಆನ್ ಲೈನ್ ದಗಾಕೋರರಿಗೆ ಗ್ರಾಹಕರ ಬದಲಿ ಸಿಮ್ ಗಳನ್ನು ಸರಬರಾಜು ಮಾಡುತ್ತಾ ಕೈತುಂಬಾ ದುಡ್ಡು ಎಣಿಸುತ್ತಿದ್ದ. ಇದೀಗ ತಗಲಾಕಿಕೊಂಡು ಕಂಬಿ ಎಣಿಸುತ್ತಿದ್ದಾನೆ.
ಈ ದಂಧೆಯ ಮೂಲಕ ಲಕ್ಸ ಲಕ್ಷ ಹಣ ಸಂಪಾದಿಸುತ್ತಿದ್ದ ಅಬ್ದುಲ್ ರೋಷನ್ ವಿರುದ್ಧ ಈಗಾಗಲೇ ಮಡಿಕೇರಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ನಕಲಿ ಸಿಮ್ ಜಾಲವನ್ನು ಭೇದಿಸಿರುವ ಕೇರಳ ಪೊಲೀಸ್ ಅಧಿಕಾರಿಗಳ ಇದೀಗ ನಮ್ಮ ಜಿಲ್ಲೆಯ ಮಡಿಕೇರಿಯ ಆರೋಪಿಯನ್ನು ಬಂಧಿಸಿ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಈತನಿಗೆ ಸಹಕಾರ ನೀಡಿದ ಇತರರ ಬಗ್ಗೆ ಕೂಡ ಮಾಹಿತಿ ಪಡೆದುಕೊಳ್ಳುತ್ತಿದ್ದು ಹಲವರು ಬಂಧನ ಆಗುವ ಸಾಧ್ಯತೆ ಇದೆ. ಕೇರಳ ರಾಜ್ಯದಲ್ಲಿ ಇದೊಂದು ದೊಡ್ಡ ಅಕ್ರಮ ದಂದೆಯ ಪ್ರಕರಣವಾಗಿದ್ದು ಕೇರಳ ಪೊಲೀಸರು ತೀವ್ರ ಸ್ವರೂಪದ ವಿಚಾರಣೆಯನ್ನು ಕೈಗೊಂಡಿದ್ದಾರೆ.