ಸಮಗ್ರ ನ್ಯೂಸ್: ಮೂರು ತಿಂಗಳ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ 108 ಆರೋಗ್ಯ ಕವಚದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಂಬ್ಯುಲೆನ್ಸ್ ಸಿಬಂದಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ರಾಜ್ಯವ್ಯಾಪಿ ಮುಷ್ಕರದ ನಿರ್ಧಾರವನ್ನು ಮಂಗಳವಾರ ಕೈ ಬಿಟ್ಟಿದ್ದಾರೆ.
ಆರೋಗ್ಯ ಇಲಾಖೆ ಆಯುಕ್ತ ಡಾ| ರಣದೀಪ್ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ಭಾಗವಹಿಸಿದ 108 ಸಿಬಂದಿ, ತಮ್ಮ ಸಮಸ್ಯೆಯನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಪ್ರತಿಯಾಗಿ ಸರಕಾರದ ನಿಲುವನ್ನು ಪ್ರತಿಪಾದಿಸಿದ ಆಯುಕ್ತರು, ಇಲಾಖೆಯಿಂದ ಯಾವುದೇ ವೇತನ ಬಾಕಿ ಇಲ್ಲ. ಸಿಬಂದಿಗೆ ವೇತನ ಪಾವತಿ ಮಾಡಬೇಕಿರುವ ಜಿವಿಕೆ ಇಎಂಆರ್ ಸಂಸ್ಥೆಯಿಂದ ಸಮಸ್ಯೆಗಳಾಗಿದ್ದರೆ, ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳಬೇಕು. ಇದಕ್ಕೆ ಸರಕಾರ ಸಹಕಾರ ಕೊಡಲಿದೆ ಎಂದು ಸಮಜಾಯಿಷಿ ನೀಡಿದರು.
ಈ ಸಂಬಂಧ ಪ್ರತ್ಯೇಕ ಪ್ರಕಟನೆ ಹೊರಡಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರಕಾರದಿಂದ ಯಾವುದೇ ವೇತನ ಬಾಕಿ ಇಲ್ಲ. ಸಂಸ್ಥೆ ಜತೆಗೆ ಒಡಂಬಡಿಕೆಯ ಪ್ರಕಾರ ಸರಕಾರದಿಂದ ಕೊಡಬೇಕಾದ ಅನುದಾನವನ್ನು ಪಾವತಿಸಲಾಗಿದೆ. ಯೋಜನೆ ನಿರ್ವಹಿಸುತ್ತಿರುವ ಜಿವಿಕೆ ಇಎಂಆರ್ ಸಂಸ್ಥೆ ವೇತನ ಬಾಕಿಯಿರಿಸಿದೆ ಎಂದಿದ್ದಾರೆ.