ಸಮಗ್ರ ನ್ಯೂಸ್: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊ ಲೀಕ್ ಮಾಡಿದ್ದು ಯಾರು ಎಂಬ ಬಗ್ಗೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಇಂದು ಮಹತ್ವದ ವಿಚಾರವನ್ನು ಹೊರಹಾಕಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ಎಲ್ಲ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪಾತ್ರ ಇದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಡಿಕೆಶಿಯದ್ದು ಎನ್ನಲಾದ ಆಡಿಯೊವನ್ನು ಪ್ಲೇ ಮಾಡಿದ್ದಾರೆ. ಜತೆಗೆ ತಮಗೆ ಎಸ್‌ಐಟಿ ಮೇಲೆ ಯಾವುದೇ ನಂಬಿಕೆ ಇಲ್ಲ. ಹೀಗಾಗಿ ಈ ಎಲ್ಲ ಸಾಕ್ಷಿಗಳನ್ನು ನೇರವಾಗಿ ಸಿಬಿಐಗೆ ನೀಡುವುದಾಗಿ ಹೇಳಿದ್ದಾರೆ.
ನಂತರ ಮಾತನಾಡಿದ ದೇವರಾಜೇಗೌಡ, ಮೊದಲು ನನಗೆ ಎಲ್.ಆರ್ ಶಿವರಾಮ್ ಗೌಡ ಕರೆ ಮಾಡಿದರು. ಬಳಿಕ ಡಿ.ಕೆ. ಶಿವಕುಮಾರ್ ಅವರ ಕೈಗೆ ಕೊಡುತ್ತಾರೆ ಎಂದು ಹೇಳುತ್ತಾ ಅದರ ಆಡಿಯೊವನ್ನು ಅರ್ಧ ಪ್ಲೇ ಮಾಡಿದರು. ಡಿಕೆಶಿ ಅವರ ಧ್ವನಿಯುಳ್ಳ ಮಾತು ಆರಂಭವಾಗುತ್ತಿದ್ದಂತೆ ಅದನ್ನು ಆಫ್ ಮಾಡಿದರು. ಹೀಗಾಗಿ ಪೂರ್ಣ ಆಡಿಯೊವನ್ನು ಬಿಡುಗಡೆ ಮಾಡಿ ಎಂದು ಮಾಧ್ಯಮದವರು ಕೇಳಿದರು. ಆದರೆ, ಅದಕ್ಕೆ ದೇವರಾಜೇಗೌಡರು ಒಪ್ಪಲಿಲ್ಲ. ನಾನಿದನ್ನು ಸಿಬಿಐಗೆ ಸಾಕ್ಷಿಯಾಗಿ ಕೊಡುತ್ತೇನೆ ಎಂದು ಹೇಳಿದರು.
ಪೆನ್ ಡ್ರೈವ್ ಕಥಾನಾಯಕರೇ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಿದ್ದಾರೆ. ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಹಾಸನದ ನನ್ನ ಗೃಹ ಕಚೇರಿಯಲ್ಲಿ ಈ ಪೆನ್ ಡ್ರೈವ್ ಕೊಟ್ಟಿದ್ದ. ಎಸ್ಐಟಿಗೆ ನನ್ನ ಬಳಿ ಇರುವ ದಾಖಲೆ ಕೊಟ್ಟಿದ್ದೇನೆ. ಎಲ್ಲವನ್ನೂ ಅವರಿಗೆ ಕೊಟ್ಟಿದ್ದೇನೆ. ಆದರೆ, ಕಾಂಗ್ರೆಸ್ ಸರ್ಕಾರ ನಿಜವಾದ ಆರೋಪಿಗಳನ್ನು ಬಚ್ಚಿಟ್ಟುಕೊಂಡಿದೆ. ಸಂತ್ರಸ್ತರಿಗೆ ಹಣ ಕೊಟ್ಟು ಕರ್ಕೊಂಡು ಬಂದಿದ್ದಾರೆ. ಎಲ್ ಆರ್ ಶಿವರಾಮೇಗೌಡರನ್ನು ಮಧ್ಯವರ್ತಿಯಾಗಿ ಕಳುಹಿಸಲಾಗಿದೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐಗೆ ವಹಿಸಬೇಕು, ನಾನು ಎಲ್ಲಾ ದಾಖಲೆ ಕೊಡುತ್ತೇನೆ ಎಂದರು.
ನನಗೆ ಕಾಂಗ್ರೆಸ್ ಕಡೆಯಿಂದ ಬಹಳ ದೊಡ್ಡ ಮಟ್ಟದ ಆಫರ್ ಬಂತು. ಕ್ಯಾಬಿನೆಟ್ ರ‍್ಯಾಂಕ್ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟರು. ಅದು ಡಿಕೆಶಿಯವರೆ ಕೊಟ್ಟ ಆಫರ್. ಪೆನ್‌ಡ್ರೈವ್ ಹೇಗೆ ರೆಡಿ ಆಯಿತು ಹೊಳೆನರಸೀಪುರಕ್ಕೆ ಹೇಗೆ ಹೋಯಿತು? ಶ್ರೇಯಸ್‌ಗೆ ಏನೆಲ್ಲಾ ಡೈರೆಕ್ಷನ್ ಇತ್ತು? ಎಲ್ಲವೂ ನನಗೆ ಗೊತ್ತಿದೆ ಎಂದು ಹೇಳಿದರು.