ಸಮಗ್ರ ನ್ಯೂಸ್: ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಖುದ್ದು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರಂತಹ ವ್ಯಕ್ತಿಗಳ ವಿರುದ್ಧ ನಾವು ಶೂನ್ಯ ಸಹಿಷ್ಣುರಾಗಿದ್ದೇವೆ. ಅಂತಹ ವ್ಯಕ್ತಿಗಳ ವಿರುದ್ಧ ಸಹನೆ ತೋರಬೇಕಾದ ಅಗತ್ಯ ಇಲ್ಲ. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನ ದೇಶದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾತನಾಡಿರುವ ಮೋದಿ, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ ಕ್ರಮ ಜರುಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇದೆ. ಸಹಸ್ರಾರು ವಿಡಿಯೋಗಳ ಇವೆ ಎಂದಾದರೆ ಅವು ಜೆಡಿಎಸ್ ಪಕ್ಷವು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಅವಧಿಯದ್ದಾಗಿವೆ ಎನ್ನುವುದು ತಿಳಿದುಬಂದಿದೆ. ಅವರು ಅಧಿಕಾರದಲ್ಲಿ ಇದ್ದಾಗ ಆ ವಿಡಿಯೋಗಳನ್ನು ಒಟ್ಟುಗೂಡಿಸಿಕೊಂಡು, ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಕ್ಕಲಿಗರು ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಆ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.
ಪ್ರಜ್ವಲ್ ದೇಶದಿಂದ ಹೊರಹೋದ ಬೆನ್ನಲ್ಲಿಯೇ ಈ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದ್ದು, ಇಡೀ ಬೆಳವಣಿಗೆ ಬಹಳ ಅನುಮಾನಾಸ್ಪದವಾಗಿದೆ. ರಾಜ್ಯ ಸರಕಾರಕ್ಕೆ ಮಾಹಿತಿ ಇದ್ದಿದ್ದರೆ ನಿಗಾ ಇಡಬೇಕಿತ್ತು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕಿತ್ತು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕರ್ನಾಟಕ ಸರ್ಕಾರ ಏನನ್ನೂ ಮಾಡಲಿಲ್ಲ. ಕನಿಷ್ಠ ಪಕ್ಷ ಕೇಂದ್ರ ಸರ್ಕಾರಕ್ಕೂ ಇದರ ಬಗ್ಗೆ ಮಾಹಿತಿಯೂ ಸಹ ನೀಡಲಿಲ್ಲ. ಅಂದರೆ ಇದು ಪೊಲಿಟಿಕಲ್ ಗೇಮ್ ಆಗಿತ್ತು. ಅವರೊಂದಿಗೆ ಮೈತ್ರಿ ಇದ್ದ ಕಾಲದಿಂದಲೂ ಈ ವಿಡಿಯೋಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಹಾಗಂತ ನಮ್ಮ ವಿಚಾರ ಇದಲ್ಲ. ಯಾವುದೇ ಅಪರಾಧಿಗಳನ್ನು ಬಿಡಬಾರದು ಎನ್ನುವುದಷ್ಟೇ ನಮ್ಮ ಉದ್ದೇಶ. ನಮ್ಮ ದೇಶದಲ್ಲಿ ಇಂತಹ ರಾಜಕೀಯ ಆಟಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದು ವಾಗ್ದಾಳಿ ನಡೆಸಿದರು.