ಸಮಗ್ರ ನ್ಯೂಸ್ : ಮಲ್ಪೆ ಮೀನುಗಾರಿಕೆ ಬಂದರಿನಲ್ಲಿರುವ ಅಗ್ನಿಶಾಮಕ ದಳದ 15 ವರ್ಷ ಹಿಂದಿನ ಎರಡು ವಾಹನಗಳನ್ನು ಸರ್ಕಾರ ಎರಡು ತಿಂಗಳ ಹಿಂದೆ ಸೇವೆಯಿಂದ ಹಿಂಪಡೆದಿದ್ದು, ಇದೀಗ ತುರ್ತು ಸಂದರ್ಭದಲ್ಲಿ ಯಾವುದೇ ಅಗ್ನಿಶಾಮಕ ವಾಹನ ಲಭ್ಯವಿಲ್ಲದೆ ಸಮಸ್ಯೆ ಸೃಷ್ಟಿಯಾಗಿದೆ. ಸರಕಾರ ತಕ್ಷಣ ವಾಹನ ಒದಗಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪತ್ರ ಬರೆದು ಆಗ್ರಹ ಮಾಡಿದ್ದಾರೆ.
ದೇಶದ ಪ್ರಮುಖ ಮೀನುಗಾರಿಕೆ ಬಂದರುಗಳಲ್ಲಿ ಒಂದಾದ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಈ ಹಿಂದೆ ಹಲವು ಅಗ್ನಿ ದುರಂತ ಪ್ರಕರಣದ ಬಳಿಕ ಮೀನುಗಾರರ ಬೇಡಿಕೆಗೆ ಸ್ಪಂದಿಸಿದ ಅಂದಿನ ಗೃಹ ಸಚಿವರಾಗಿದ್ದ ಡಾ. ವಿ. ಎಸ್. ಆಚಾರ್ಯ ಮಲ್ಪೆ ಮೀನುಗಾರಿಕಾ ಬಂದರಿನ ಸುರಕ್ಷತೆಯ ದೃಷ್ಟಿಯಿಂದ ಮಂಜೂರು ಮಾಡಿದ್ದ ಅಗ್ನಿಶಾಮಕ ದಳ ಇದೀಗ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ನಿನ್ನೆ ಮಲ್ಪೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಸಂದರ್ಭದಲ್ಲಿ ಅಗ್ನಿಶಾಮಕದಳದ ವಾಹನ ಲಭ್ಯವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇತ್ತೀಚೆಗೆ ಗಂಗೊಳ್ಳಿಯಲ್ಲಿ ನಡೆದ ಬೋಟ್ ಅಗ್ನಿ ದುರಂತ ಘಟನೆಯ ಬಳಿಕವೂ ಎಚ್ಚೆತ್ತುಕೊಳ್ಳದ ಸರ್ಕಾರ ಮೀನುಗಾರರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ.
ರಾಜ್ಯದಾದ್ಯಂತ 15 ವರ್ಷ ಹಿಂದಿನ ಸುಮಾರು 250 ಅಗ್ನಿಶಾಮಕ ದಳದ ವಾಹನವನ್ನು ಸಾರಿಗೆ ಇಲಾಖೆಯ ನಿಯಮದಂತೆ ಸೇವೆಯಿಂದ ಹಿಂಪಡೆದಿದ್ದು ಈವರೆಗೆ ಯಾವುದೇ ಹೊಸ ವಾಹನವನ್ನು ಒದಗಿಸಿಲ್ಲ. ಬೇಸಿಗೆ ಸಂದರ್ಭದಲ್ಲಿ ಗಣನೀಯ ಪ್ರಮಾಣದ ಅಗ್ನಿ ಅಕಸ್ಮಿಕ ಗಳು ಸಂಭವಿಸುವ ಸಾಧ್ಯತೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸಮಸ್ಯೆಯ ಗಂಭೀರತೆ ಅರಿತು ಸಾವಿರಾರು ಮೀನುಗಾರಿಕಾ ಬೋಟ್ ಗಳು ಮೀನುಗಾರಿಕೆ ನಡೆಸುವ ಮಲ್ಪೆ ಮೀನುಗಾರಿಕಾ ಬಂದರಿನ ಅಗ್ನಿಶಾಮಕ ದಳಕ್ಕೆ ತಕ್ಷಣ ವಾಹನ ಒದಗಿಸುವಂತೆ ಹಾಗೂ ರಾಜ್ಯದಾದ್ಯಂತ ಎಲ್ಲಾ ಅಗ್ನಿಶಾಮಕ ದಳಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹ ಮಾಡಿದ್ದಾರೆ.