ಸಮಗ್ರ ನ್ಯೂಸ್: ಇತ್ತಿಚೇಗಷ್ಟೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಆದರೆ ಅದೇ ಮಂಡ್ಯದ ಪಾಂಡವಪುರದ ಹೆಲ್ತ್ ಕ್ವಾರ್ಟರ್ಸ್‌ನಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿ, ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.
ಪಾಂಡವಪುರದ ಹೆಲ್ತ್ ಕ್ವಾರ್ಟರ್ಸ್ ಮೇಲೆ ಖಚಿತ ಮಾಹಿತಿಗಳೊಂದಿಗೆ ಭಾನುವಾರ ತಡರಾತ್ರಿ ಮಂಡ್ಯ ಡಿಎಚ್‌ಒ ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆಗೆ ಗರ್ಭಪಾತ ಮಾಡಿಸಲು ಗರ್ಭಿಣಿಗೆ ಔಷಧ ನೀಡಲಾಗಿತ್ತು, ಇದರಿಂದ ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ.
ಮೈಸೂರು ಮೂಲದ ಮಹಿಳೆಗೆ ಈಗಾಗಲೇ 2 ಹೆಣ್ಣು ಮಗು ಜನಿಸಿತ್ತು. 3ನೇ ಮಗು ಹೆಣ್ಣು ಮಗು ಎಂದು ತಿಳಿದು ಗರ್ಭಪಾತ ಮಾಡಿಸಿಕೊಳ್ಳಲು ಪಾಂಡವಪುರಕ್ಕೆ ಆಗಮಿಸಿದ್ದರು. ಇದೀಗ ನಾಲ್ಕು ತಿಂಗಳ ಹೆಣ್ಣು ಭ್ರೂಣ ಹತ್ಯೆ ಮಾಡಲಾಗಿದೆ. ಗರ್ಭಪಾತ ಮಾಡಿಸಿದ ಆನಂದ್ ಮತ್ತು ಅಶ್ವಿನಿ ದಂಪತಿ ಸೇರಿ ಮೂವರನ್ನು ಬಂಧಿಸಲಾಗಿದೆ.
ಪಾಂಡವಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಂಪತಿ ಹೊರಗುತ್ತಿಗೆ ನೌಕರರಾಗಿದ್ದಾರೆ. ಅಶ್ವಿನಿ ಡಿ ದರ್ಜೆ ನೌಕರೆಯಾಗಿದ್ದರೆ, ಆನಂದ ಆಂಬ್ಯುಲೆನ್ಸ್ ಚಾಲಕನಾಗಿದ್ದ. ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಬಳಿಯ ಮನೆಯಲ್ಲಿ ಕೃತ್ಯ ನಡೆಸುತ್ತಿದ್ದಾಗ ದಂಪತಿಗಳು ಸಿಕ್ಕಿಬಿದ್ದಿದ್ದಾರೆ. ಪಾಂಡವಪುರಕ್ಕೆ ಮಂಡ್ಯ ಡಿಸಿ ಕುಮಾರ್, ಎಸ್.ಪಿ. ಯತೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.