ಸಮಗ್ರ ನ್ಯೂಸ್: ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ (ಮೇ 3) ತಲ್ಲಣ ಸೃಷ್ಟಿಯಾಗಿದ್ದು, ಎನ್‌ಎಸ್‌ಇ ನಿಫ್ಟಿ ಹಾಗೂ ಬಿಎಸ್‌ಇ ಸೆನ್ಸೆಕ್ಸ್ ಭಾರಿ ಕುಸಿತ ಕಂಡ ಕಾರಣ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.
ದಿನದ ವಹಿವಾಟಿನ ಅಂತ್ಯಕ್ಕೆ ಎನ್‌ಎಸ್‌ಇ ನಿಫ್ಟಿ 50 ಸುಮಾರು 172.35 ಪಾಯಿಂಟ್‌ಗಳ ಕುಸಿತ ಕಂಡರೆ, ಬಿಎಸ್‌ಇ ಸೆನ್ಸೆಕ್ಸ್ (BSE Sensex) 733 ಪಾಯಿಂಟ್‌ಗಳ ಕುಸಿತ ಕಂಡಿದೆ. ಆರಂಭದಲ್ಲಿ ಲಾಭ ಕಂಡ ಹೂಡಿಕೆದಾರರು ದಿನದ ಅಂತ್ಯಕ್ಕೆ ನಷ್ಟ ಅನುಭವಿಸಿದರು.
ಎನ್‌ಎಸ್‌ಇ ನಿಫ್ಟಿ 50 ದಿನದ ವಹಿವಾಟನ್ನು 22,456.65 ಪಾಯಿಂಟ್‌ಗಳಿಗೆ ಅಂತ್ಯಗೊಳಿಸಿತು. ಇನ್ನು ಬಿಎಸ್‌ಇ ಸೆನ್ಸೆಕ್ಸ್ 73,846 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿತು. ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾದರೂ ಎಲ್&ಟಿ. ಮಾರುತಿ ಸುಜುಕಿ, ರಿಲಯನ್ಸ್ ಇಂಡಸ್ಟ್ರೀಸ್, ನೆಸ್ಲೆ ಇಂಡಿಯಾ, ಭಾರ್ತಿ ಏರ್‌ಟೆಲ್ ಸೇರಿ ಹಲವು ಕಂಪನಿಗಳು ಲಾಭ ಗಳಿಸಿವೆ. ಕೋಲ್ ಇಂಡಿಯಾ, ಗ್ರಾಸಿಂ ಇಂಡಸ್ಟ್ರೀಸ್, ಒಎನ್‌ಜಿಸಿ, ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಹಾಗೂ ಹಿಂಡಾಲ್ಕೋ ಇಂಡಸ್ಟ್ರೀಸ್ ಸೇರಿ ಹಲವು ಕಂಪನಿಗಳು ನಷ್ಟ ಅನುಭವಿಸಿವೆ.
ಶುಕ್ರವಾರ ಬೆಳಗ್ಗೆ ಷೇರು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಲೇ ಸುಮಾರು 50 ಪಾಯಿಂಟ್‌ಗಳ ಏರಿಕೆಯಾಯಿತು. ಇದರಿಂದ ಹೂಡಿಕೆದಾರರಿಗೆ ಖುಷಿಯಾಯಿತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಪಾಯಿಂಟ್‌ಗಳ ಕುಸಿತ ಜಾಸ್ತಿಯಾಗುತ್ತಲೇ ಹೋಯಿತು. ಇದರಿಂದ ಹೂಡಿಕೆದಾರರು ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದರು. ಕಳೆದ ಕೆಲ ದಿನಗಳಿಂದ ಷೇರು ಮಾರುಕಟ್ಟೆ ವಹಿವಾಟು ಉತ್ತಮವಾಗಿತ್ತು. ಆದರೆ, ಶುಕ್ರವಾರ ದಿಢೀರನೆ ಕುಸಿತ ಕಂಡಿದ್ದು, ಕೋಟಿ ಕೋಟಿ ನಷ್ಟ ಉಂಟಾಗಿದೆ.