ಸಮಗ್ರ ನ್ಯೂಸ್ : ಯಾವುದೇ ರಾಗ, ದ್ವೇಷವಿಲ್ಲದೆ ಕರ್ತವ್ಯ ನಿರ್ವಹಿಸುವುದಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಶಾಸಕನಾಗಿ, ಈಗ ಒಂದು ಕೋಮಿನ ಬಗ್ಗೆ ಹೀನಾಯವಾಗಿ ಮಾತನಾಡುವ, ದ್ವೇಷ ಬಿತ್ತುವ ಕೋಮುವಾದಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶಾಸಕನಾಗಿರಲು ನಾಲಾಯಕ್ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಖಂಡ್ರೆ ಕುಟುಂಬ ಲಿಂಗಾಯತರಿಗೆ ಕೊಟ್ಟಿರುವ ಕೊಡುಗೆ ಏನು ಎಂದು ಯತ್ನಾಳ ಪ್ರಶ್ನಿಸಿದ್ದಾರೆ. ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿ ಸಂಘಟನೆ ಮಾಡಿದ್ದೇ ಶತಾಯುಷಿ ಭೀಮಣ್ಣ ಖಂಡ್ರೆ ಅವರು. ಬೆಂಗಳೂರಿನಲ್ಲಿ ಭವ್ಯ ವೀರಶೈವ ಲಿಂಗಾಯತ ಭವನ ನಿರ್ಮಿಸಿದ್ದು ಭೀಮಣ್ಣ ಖಂಡ್ರೆ ಅವರು. ಇಂದು ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ವೀರಶೈವ ಭವನ ನಿರ್ಮಾಣವಾಗಿದ್ದರೆ ಅದಕ್ಕೆ ಭೀಮಣ್ಣ ಖಂಡ್ರೆಯವರು ಕಾರಣ ಎಂದು ಮಂಗಳವಾರ ನಗರದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಿರುವುದು ಮಹಾಸಭಾ. ಇದರ ಬಗ್ಗೆ ಮಾಹಿತಿಯೂ ಇಲ್ಲದ, ಇತ್ತ ಬಸವವಾದಿಯೂ ಅಲ್ಲದ, ಅತ್ತ ಹಿಂದೂ ಅಲ್ಲದ ಯತ್ನಾಳ ರಾತ್ರಿ ಸೆರೆ ಕುಡಿದು, ಮಾಂಸ ತಿಂದು, ಬೆಳಿಗ್ಗೆ ವಿಭೂತಿ ಹಚ್ಚಿಕೊಂಡು ಬರುತ್ತಾರೆ. ಇವರಿಗೆ ವೀರಶೈವ ಲಿಂಗಾಯತ ಮಹಾಸಭಾ ಬಗ್ಗೆಯಾಗಲೀ, ನಮ್ಮ ತಂದೆ ಪೂಜ್ಯ ಭೀಮಣ್ಣ ಖಂಡ್ರೆ ಅವರ ಬಗ್ಗೆಯಾಗಲೀ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಜಾಕಾರರ ವಿರುದ್ಧ ಹೋರಾಟ ನಡೆಸಿದ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸೆರೆ ವಾಸ ಅನುಭವಿಸಿದ ನಮ್ಮ ತಂದೆ ಸಚಿವರಾಗಿ, ಶಾಸಕರಾಗಿ, ವೀರಶೈವ ಲಿಂಗಾಯತ ಮುಖಂಡರಾಗಿ ಈ ನಾಡಿಗೆ ನೀಡಿರುವ ಕೊಡುಗೆ ಅನುಪಮವಾದ್ದು. ಇತಿಹಾಸವರಿಯದ ಯತ್ನಾಳ, ಭೀಮಣ್ಣ ಖಂಡ್ರೆ ಅವರ ಬಗ್ಗೆ ಮಾತನಾಡುವುದಿರಲಿ, ಅವರ ಉಂಗುಷ್ಟದ ಧೂಳಿಗೂ ಸಮನಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಬಗ್ಗೆ ಮಾತನಾಡಿದ್ದಾರೆ. ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರೊಂದಿಗೆ ಸೇರಿ ಈ ಸಂಸ್ಥೆ ಕಟ್ಟಲು ನಮ್ಮ ತಂದೆ ಎಷ್ಟು ಬೆವರು ಸುರಿಸಿದ್ದಾರೆ. ಎಷ್ಟು ಹಣ ಹೂಡಿಕೆ ಮಾಡಿದ್ದಾರೆ ಎಂಬುದು ಇಡೀ ಬೀದರ್ ಜನತೆಗೆ ತಿಳಿದಿದೆ. ಈ ಬಗ್ಗೆ ಗೋಮುಖವ್ಯಾಘ್ರ ಯತ್ನಾಳಗಾಗಲೀ, ಸದಾ ಸುಳ್ಳು ಆರೋಪ ಮಾಡುತ್ತಲೇ ಕಾಲ ತಳ್ಳುವ ಭಗವಂತ ಖೂಬಾಗಾಗಲೀ ವಿವರಣೆ ನೀಡುವ ಅಗತ್ಯವಿಲ್ಲ ತಮಗೆ ಇಲ್ಲ ಎಂದು ತಿಳಿಸಿದ್ದಾರೆ.