ಸಮಗ್ರ ನ್ಯೂಸ್: ಭಾರತೀಯ ರೈಲ್ವೆ ಇಲಾಖೆಯು ಜುಲೈನಲ್ಲಿ ಕಡಿಮೆ ಅಂತರದ ವಂದೇ ಮೆಟ್ರೋ ರೈಲು ಮತ್ತು ಮುಂದಿನ ತಿಂಗಳು ವಂದೇ ಭಾರತ್‍ನ ಸ್ಲೀಪರ್ ಆವೃತ್ತಿಯ ಗಳ ಪ್ರಾಯೋಗಿಕ ಸಂಚಾರ ಪ್ರಾರಂಭಿಸಲಿದೆ. ಮೊದಲ ಹಂತದಲ್ಲಿ ವಂದೇ ಭಾರತ್ ಮೆಟ್ರೋ ರೈಲು ದೆಹಲಿಯಿಂದ ಸಂಚಾರ ಕೈಗೊಳ್ಳುವ ಸಾಧ್ಯತೆ ಇದೆ.
ವಂದೇ ಮೆಟ್ರೋ ರೈಲುಗಳು 100-250 ಕಿ.ಮೀ. ಮಾರ್ಗಗಳಲ್ಲಿ ಸಂಚರಿಸಿದರೆ, ವಂದೇ ಭಾರತ್ ಸ್ಲೀಪರ್ ರೈಲುಗಳು 1,000 ಕಿ.ಮೀ. ವ್ಯಾಪ್ತಿಯ ಮಾರ್ಗಗಳಲ್ಲಿ ನಿಯೋಜಿಸಲ್ಪಡುತ್ತವೆ. ವಂದೇ ಮೆಟ್ರೋ ರೈಲುಗಳು ಸುಮಾರು 124 ನಗರಗಳನ್ನು ಸಂಪರ್ಕಿಸುತ್ತದೆ ಮತ್ತು ಗುರುತಿಸಲಾದ ಕೆಲವು ಮಾರ್ಗಗಳಾದ ಲಖನೌ-ಕಾನ್ಪುರ, ಆಗ್ರಾ-ಮಥುರಾ, ದೆಹಲಿ-ರೇವಾರಿ, ಭುವನೇಶ್ವರ-ಬಾಲಸೋರ್ ಮತ್ತು ತಿರುಪತಿ-ಚೆನ್ನೈ ಮಧ್ಯೆ ಸಂಚರಿಸಲಿವೆ.
ವಂದೇ ಮೆಟ್ರೋ ರೈಲುಗಳು ತಲಾ 12 ಕೋಚ್‍ಗಳನ್ನು ಮತ್ತು ದೊಡ್ಡ ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿರುತ್ತವೆ. ಪ್ರಯಾಣಿಕರು ನಿಲ್ಲಲು ಹೆಚ್ಚಿನ ಸ್ಥಳಾವಕಾಶ ಇರುತ್ತದೆ. ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಅವಶ್ಯಕತೆಯಿದ್ದರೆ, ಈ ರೈಲುಗಳು 16 ಕೋಚ್‍ಗಳನ್ನು ಸಹ ಹೊಂದಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.