ಸಮಗ್ರ ನ್ಯೂಸ್: ರಾಜ್ಯದೆಲ್ಲೆಡೆ ಬರ ಛಾಯೆ ತಟ್ಟಿದೆ. ನೀರಿಲ್ಲದೆ ಜನರು ಪರದಾಡುವ ಪರಿಸ್ಥಿತಿ ಬಂದೊದಗಿದೆ. ಜನರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಹಾಹಾಕಾರ ಅನುಭವಿಸುತ್ತಿದೆ. ಈ ನಡುವೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಬಿಸಿಲ ಬೇಗೆ ಮೀನುಗಳಿಗೂ ತಟ್ಟಿದೆ. ಕೆರೆಯ ನೀರು ಬತ್ತಿದ್ದರಿಂದ ಸಾವಿರಾರು ಮೀನುಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಮಳೆ ಕೊರತೆಯಿಂದ ಕೆರೆಕಟ್ಟೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಕೆರೆಯ ಗುಂಡಿಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರಿನಲ್ಲಿ ಮೀನುಗಳು ಜೀವ ಉಳಿಸಿಕೊಂಡಿದ್ದವು. ಅದರೆ ಇತ್ತೀಚೆಗೆ ಬಿಸಿಲಿಗೆ ಕೆರೆಯಲ್ಲಿನ ನೀರು ಸಂಪೂರ್ಣವಾಗಿ ಬತ್ತಿದೆ. ಹೀಗಾಗಿ ಕೆರೆಯಲ್ಲಿದ್ದ ಮೀನುಗಳು ವಿಲವಿಲ ಒದ್ದಾಡಿ ಪ್ರಾಣಬಿಟ್ಟಿವೆ.
ಈ ನೀರು ಕಲುಷಿತಗೊಂಡು ಮೀನುಗಳು ಸತ್ತಿವೆ. ಒಂದು ವಾರದಿಂದ ಮೀನುಗಳು ಸಾಯುತ್ತಿದ್ದರೂ ಯಾರೂ ಭೇಟಿ ನೀಡಿ ಪರಿಶೀಲಿಸಲಿಲ್ಲ, ಸತ್ತ ಮೀನು ತೆರವುಗೊಳಿಸುವ ಕಾರ್ಯ ಮಾಡಿರಲಿಲ್ಲ. ಇದರಿಂದ ದುರ್ವಾಸನೆ ಉಂಟಾಗಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಹೀಗಾಗಿ ರತ್ನಸಂದ್ರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸತ್ತ ಮೀನುಗಳನ್ನು ಜೆಸಿಬಿ ಬಳಸಿ ತೆರವು ಮಾಡಿಸಿದರು.