ಸಮಗ್ರ ನ್ಯೂಸ್ :ಪ್ರಧಾನಿ ಮೋದಿಯವರ ಹೇಳಿಕೆಯನ್ನು ಟೀಕಿಸಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಬಿಕಾನೇರ್‌ನ ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಜಿಲ್ಲಾಧ್ಯಕ್ಷ ಉಸ್ಮಾನ್ ಘನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ರಾಜಸ್ತಾನದ ಬಾನಸ್ವರಾದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ ಪ್ರಧಾನಿ ಮೋದಿ ಯವರು ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಅವರನ್ನು ಪಕ್ಷದಿಂದ ಉಚ್ಛಾಟನೆ ಗೊಳಿಸಲಾಗಿತ್ತು. ಇದೀಗ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಮುಕ್ತ ಪ್ರಸಾದ್ ನಗರ ಪೊಲೀಸ್ ಠಾಣಾಧಿಕಾರಿ ಧೀರೇಂದ್ರೆ ಶೆಖಾವತ್ ಮಾಹಿತಿ ನೀಡಿ, ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ದಿನವೇ ಅವರ ಬಂಧನಕ್ಕೆ ನಾವು ತೆರಳಿದ್ದೆವು. ಆದರೆ ಅವರು ದಿಲ್ಲಿಯಲ್ಲಿದ್ದರು. ಶನಿವಾರ ಅವರು ವಾಪಾಸ್ಸಾಗ್ತಿದ್ದಂತೆ ಅವರು ನೇರವಾಗಿ ಠಾಣೆಗೆ ಬಂದು ತಮ್ಮ ಬಂಧನಕ್ಕೆ ಪೊಲೀಸ್ ವಾಹನ ಕಳುಹಿಸಲು ನಿಮಗೆಷ್ಟು ಧೈರ್ಯ ಎಂದು ತಗಾದೆ ತೆಗೆದಿದ್ದರು.
ನಮಗೆ ಅವರು ಯಾರೆಂಬುದೇ ಗೊತ್ತಿರಲಿಲ್ಲ. ಪೊಲೀಸ್ ಠಾಣೆಯ ಎದುರು ತಮ್ಮ ನೂರಾರು ಬೆಂಬಲಿಗರ ಜೊತೆಗೆ ಬಂದಿದ್ದ ಉಸ್ಮಾನ್ ಘನಿ, ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದರು. ಪೊಲೀಸ್ ಠಾಣೆ ಎದುರು ನಡೆಯುತ್ತಿದ್ದ ಹೈಡ್ರಾಮಾ ತಾರಕಕ್ಕೇರುತ್ತಿದ್ದಂತೆ ನಾವು ಅವರನ್ನು ಬಂಧಿಸಿದ್ದೇವೆ. ಅಲ್ಲದೇ ಸೆಕ್ಷನ್ 151 ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಅವರನ್ನು ಹಾಜರು ಪಡಿಸುತ್ತೇವೆ ಎಂದು ಮಾಹಿತಿ ನೀಡಿದರು.
ಉಸ್ಮಾನ್ ಘನಿ ದೆಹಲಿಯಲ್ಲೂ ಪಕ್ಷ ವಿರೋಧಿ ಹೇಳಿಕೆ ಕೊಟ್ಟಿದ್ದರು. ಈ ಬಾರಿ ಬಿಜೆಪಿ ರಾಜಸ್ಥಾನದ ೨೫ ಸ್ಥಾನಗಳಲ್ಲಿ ಮೂರು-ನಾಲ್ಕು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಮುಸ್ಲಿಂರು, ಜಾಟ್ ಸಮುದಾಯದ ಜನ ಪ್ರಧಾನಿ ಮೋದಿ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಉಸ್ಮಾನ್ ಘನಿ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಘನಿ ಹೇಳಿಕೆಯಿಂದ ತೀವ್ರ ಮುಜುಗರಕ್ಕೀಡಾಗಿದ್ದ ಬಿಜೆಪಿ ಅವರನ್ನು ಉಚ್ಛಾಟಿಸಿದೆ.