ಸಮಗ್ರ ನ್ಯೂಸ್ : ಪತ್ನಿ ಮೇಲೆ ಸಂಶಯ ಪಟ್ಟು ಪತಿಯೊಬ್ಬ ಕೊಡಲಿಯಿಂದ ಕೊಂದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮಲ್ಲವ್ವ ಬಳ್ಳೂರ ಮೃತ ದುರ್ದೈವಿ. ಶಿವಪ್ಪ ಬಳ್ಳೂರ ಎಂಬಾತ ಪತ್ನಿ ಕೊಂದ ಆರೋಪಿ, ಶಿವಪ್ಪ ಶುಕ್ರವಾರ ರಾತ್ರಿ ಕುಡಿದು ಬಂದು ಪತ್ನಿ ಮಲ್ಲವ್ವಳ ಜತೆಗೆ ಜಗಳ ಮಾಡಿದ್ದಾನೆ. ಇಂದು ಬೆಳಗಿನ ಜಾವ ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಕೊಂದಿದ್ದಾನೆ. ಮದುವೆ ಆಗಿ 15 ವರ್ಷವಾದರೂ ಶಿವಪ್ಪ ಪತ್ನಿ ಮೇಲೆ ಸಂಶಯ ಪಡುತ್ತಿದ್ದನು.
ಹೆಂಡತಿಯ ಜೊತೆಗೆ ಶಿವಪ್ಪ ಶುಕ್ರವಾರ ರಾತ್ರಿಯಿಡೀ ಜಗಳ ಮಾಡಿ ಬೆಳಗ್ಗೆ ಸಿಟ್ಟಿನಲ್ಲಿ ಪತ್ನಿಯನ್ನು ಕೊಂದು ಮನೆಯಲ್ಲಿಯೇ ಇದ್ದನು. ಅಕ್ಕ-ಪಕ್ಕದ ಮನೆಯವರು ಬಂದು ನೋಡಿದಾಗ ರಕ್ತಸಿಕ್ತವಾಗಿ ಬಿದ್ದಿದ್ದ ಮಲ್ಲವ್ವಳನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಜಾಗದಲ್ಲೇ ಕುಳಿತಿದ್ದ ಶಿವಪ್ಪನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.