ಸಮಗ್ರ ನ್ಯೂಸ್: ಹಾಸನದಲ್ಲಿ ಮತದಾನ ಪ್ರಕ್ರಿಯೆ ಮುಗಿಯುವ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೆ.ಬಿ.ಪಾಳ್ಯದಲ್ಲಿ ನಡೆದಿದೆ.
ಕೆ.ಬಿ.ಪಾಳ್ಯದ ಮತಗಟ್ಟೆ ಸಂಖ್ಯೆ 249ರ ಬಳಿ ಕಾಂಗ್ರೆಸ್‌ನ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಕೈ ಕಾರ್ಯಕರ್ತನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತಗಟ್ಟೆಗೆ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ತಾಯಿ ಅನುಪಮಾ ಮಹೇಶ್ ಭೇಟಿ ನೀಡಿದ್ದರು. ಈ ವೇಳೆ ಜೆಡಿಎಸ್ ಪಕ್ಷದ ಪರ ದಳ ಕಾರ್ಯಕರ್ತರು ಜೈಕಾರ ಕೂಗಿದ್ದಾರೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಎರಡು ಪಕ್ಷದವರ ನಡುವೆ ಮಾರಾಮಾರಿ ನಡೆದಿದೆ
ಜೆಡಿಎಸ್ ಕಾರ್ಯಕರ್ತರಾದ ಸಾಗರ್ ಹಾಗೂ ಪ್ರದೀಪ್ ಎಂಬುವವರು ಕಬ್ಬಿಣದ ರಾಡ್‌ನಿಂದ ಕಾಂಗ್ರೆಸ್ ಕಾರ್ಯಕರ್ತರಾದ ಮೋಹನ್‌ಕುಮಾರ್, ಗಿರೀಶ್, ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತ ಮೋಹನ್‌ಕುಮಾರ್ ಅವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರಿಂದಲೂ ಜೆಡಿಎಸ್ ಕಾರ್ಯಕರ್ತರ ಮೇಲೂ ಹಲ್ಲೆ ನಡೆದಿದೆ ಎಂದ ಆರೋಪ ಕೇಳಿಬಂದಿದೆ.
ಜೆಡಿಎಸ್‌ನ ಪ್ರದೀಪ್, ಸಾಗರ್ ಹಾಗೂ ಗೌತಮ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಜೆಡಿಎಸ್ ಕಾರ್ಯಕರ್ತನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.