ಸಮಗ್ರ ನ್ಯೂಸ್: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯು ಒಂದು. ಇದರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಯಿತ್ತು. ಈ ಶಕ್ತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ವಿದ್ಯಾರ್ಥಿನಿಯೊಬ್ಬರು, ಉಚಿತ ಪ್ರಯಾಣದ ಟಿಕೆಟ್‌ಗಳಿಂದ ಮಾಡಿದ ಹಾರದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ವಿಭಿನ್ನ ರೀತಿಯಲ್ಲಿ ಸನ್ಮಾನಿಸಿರುವುದು ಗಮನ ಸೆಳೆದಿದೆ.
ಅರಸೀಕೆರೆಯ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿ ಎಂ.ಬಿ. ಜಯಶ್ರೀ, ತಾವು ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್‌ಗಳಿಂದ ಮಾಡಿದ್ದ ಹಾರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹಾಕಿ ಗೌರವಿಸಿದ್ದಾರೆ. ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಪರ ಅರಸೀಕೆರೆಯಲ್ಲಿ ಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಳಿದ್ದಾಗ ವಿದ್ಯಾರ್ಥಿನಿ ಎಂ.ಬಿ. ಜಯಶ್ರೀ ಫ್ರೀ ಟಿಕೆಟ್ ಹಾರವನ್ನು ಸಿಎಂ ಅವರಿಗೆ ಅರ್ಪಿಸಿದ್ದಾರೆ.
ವಿದ್ಯಾರ್ಥಿನಿ ಉಚಿತ ಟಿಕೆಟ್‌ಗಳ ಹಾರ ಹಾಕಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಅರಸೀಕೆರೆಯ ವಿದ್ಯಾರ್ಥಿನಿ ಇಂದು ನನ್ನ ಕೊರಳಿಗೆ ಹಾಕಿದ ಉಚಿತ ಬಸ್ ಟಿಕೆಟ್ ಗಳ ಮಾಲೆ ಆಕೆ ವ್ಯಕ್ತಪಡಿಸಿದ ಕೃತಜ್ಞತೆಯ ಮಾಲೆಯೂ ಹೌದು, ನಮ್ಮ ಸರ್ಕಾರದ ಸಾಧನೆಯ ಮಾಲೆಯೂ ಹೌದು, ಬಹುಷ: ಇದು ಈ ಚುನಾವಣೆಯ ವಿಜಯಮಾಲೆಯೂ ಇರಬಹುದೇನೋ?
ಅರಸೀಕೆರೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನನ್ನ ಕಡೆ ಏದುಸಿರುಬಿಡುತ್ತಾ ಓಡೋಡಿ ಬಂದ ಕಾನೂನು ವಿದ್ಯಾರ್ಥಿನಿ ಜಯಶ್ರೀ ತಾನು ಉಚಿತವಾಗಿ ಪ್ರಯಾಣಿಸಿದ್ದ ಬಸ್ ಟಿಕೆಟ್ ಗಳಲ್ಲಿಯೇ ಮಾಡಿಟ್ಟಿದ್ದ ಮಾಲೆಯನ್ನು ತಂದು ಹಾಕಿ ಕೃತಜ್ಞತೆ ಹೇಳಿದಳು. ಎಂದು ಟ್ವೀಟ್ ಮುಖಾಂತರ ಹೇಳಿದ್ದಾರೆ.