ಸಮಗ್ರ ನ್ಯೂಸ್ : ಗೂಡ್ಸ್ ರೈಲಿನ ಚಕ್ರಗಳ ನಡುವೆ ಕುಳಿತು ಸುಮಾರು 100 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ ಬಾಲಕನನ್ನು ರೈಲ್ವೇ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಜಯ್ ಎಂಬ ಹೆಸರಿನ ಬಾಲಕ ಗೂಡ್ಸ್ ರೈಲಿನ ಟೈರ್‌ಗಳ ನಡುವೆ ಕುಳಿತು
ಸುಮಾರು 100 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ್ದಾನೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನನ್ನು ಉತ್ತರ ಪ್ರದೇಶದ ಹರ್ದೋಯಿಯಲ್ಲಿ ರೈಲ್ವೇ ಭದ್ರತಾ ಸಿಬ್ಬಂದಿ ಆತನನ್ನು ನೋಡಿ ರಕ್ಷಿಸಿದ್ದಾರೆ.
ಹರ್ದೋಯಿಯಲ್ಲಿ ರೈಲು ನಿಲುಗಡೆಯಾದಾಗ ಆರ್‌ಪಿಎಫ್ ಸಿಬ್ಬಂದಿ ದಿನನಿತ್ಯದ ತಪಾಸಣೆ ನಡೆಸಿದಾಗ ಬಾಲಕ ಕಂಡು ಬಂದಿದ್ದಾನೆ.
ಭಯಭೀತನಾಗಿದ್ದ ಬಾಲಕನ ಮೈಕೈ ಮೇಲೆ ಮಸಿ ತುಂಬಿಕೊಂಡಿತ್ತು. ವಿಚಾರಣೆಗಾಗಿ ರೈಲ್ವೇ ಇಲಾಖೆ ಸಿಬ್ಬಂದಿ ಆತನನ್ನು ಮಕ್ಕಳ ಕಲ್ಯಾಣ ಸಮಿತಿಯ ಉಸ್ತುವಾರಿಗೆ ವಹಿಸಲಾಗಿದೆ. ಮಕ್ಕಳ ಸಹಾಯವಾಣಿ ಸಿಬ್ಬಂದಿಯ ನೆರವಿನೊಂದಿಗೆ ಆತನನ್ನು ಮಕ್ಕಳ ಮನೆಗೆ ವರ್ಗಾಯಿಸಲಾಗಿದೆ.