ಸಮಗ್ರ ನ್ಯೂಸ್: ‘ಕೇಂದ್ರದಲ್ಲಿ ಆಡಳಿತ ನಡೆಸಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಯಾವುದೇ ಬೇಡಿಕೆ ಈಡೇರಿಸದೆ, ರೈತರಿಗೆ ವಿರುದ್ಧವಾಗಿ ಆಡಳಿತ ನಡೆಸಿ ರೈತ ವಿರೋಧಿ ನೀತಿ ಅನುಸರಿಸಿದೆ. ಈ ಕಾರಣದಿಂದ ಬಿಜೆಪಿ ಹೊರತಾದ ಇತರ ಪಕ್ಷಗಳನ್ನು ಬೆಂಬಲಿಸಬೇಕು’ ಎಂದು
ಕರ್ನಾಟಕ ರಾಜ್ಯ ರೈತ ಸಂಘದ ಸುಳ್ಯ ಘಟಕ ಕರೆ ನೀಡಿದೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ, ‘ನರೇಂದ್ರ ಮೋದಿ ಸರ್ಕಾರ 2014ರಲ್ಲಿ ಆಡಳಿತಕ್ಕೆ ಬರುವ ವೇಳೆ ವಿವಿಧ ಭರವಸೆಗಳನ್ನು ನೀಡಿದ್ದರು. ಸ್ವಾಮಿನಾಥನ್ ಆಯೋಗದ ವರದಿ ಯಥಾವತ್ ಜಾರಿ ಮಾಡುವುದಾಗಿ ನೀಡಿದ್ದ ಭರವಸೆಯನ್ನೂ ಈಡೇರಿಸಿಲ್ಲ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಭೂ ಸುಧಾರಣಾ ಕಾನೂನು ಸೇರಿದಂತೆ ವಿವಿಧ ರೀತಿಯಲ್ಲಿ ರೈತರನ್ನು ಕೇಂದ್ರ ಸರ್ಕಾರ ಸಂಕಷ್ಟಕ್ಕೆ ತಳ್ಳಿದೆ’ ಎಂದು ಅವರು ಆರೋಪಿಸಿದರು.
‘ಬಿಜೆಪಿ ಹೊರತಾದ ಸರ್ಕಾರ ಬರಬೇಕು. ಇಲ್ಲದೆ ಇದ್ದರೆ ರೈತರಿಗೆ ಉಳಿಗಾಲವಿಲ್ಲ. ಯಾವ ಪಕ್ಷ ಎಂದು ನಾವು ಹೇಳುತ್ತಿಲ್ಲ’ ಎಂದು ಅವರು ಹೇಳಿದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಮಡ್ತಿಲ, ಜಿಲ್ಲಾ ಘಟಕದ ಉಪಾಧ್ಯಕ್ಷ ದಿವಾಕರ ಪೈ ಮಜಿಗುಂಡಿ, ತಾಲ್ಲೂಕು ಘಟಕದ ಉಪಾಧ್ಯಕ್ಷ ಸುಳ್ಯಕೋಡಿ ಮಾಧವ ಗೌಡ, ಸಂಪಾಜೆ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಪೆಲ್ಲಡ್ಕ ಭಾಗವಹಿಸಿದ್ದರು.