ಸಮಗ್ರ ನ್ಯೂಸ್ : ಏ29ರಂದು ಪಟ್ಟಣಕ್ಕೆ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ, ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಪರ ಪ್ರಚಾರ, ಹಾಗೂ ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ರವರ ಪರ ಮತಯಾಚನೆ ಮಾಡಲು ಇವರು ಆಗಮಿಸಲಿದ್ದಾರೆಂದು ಕೂಡ್ಲಿಗಿ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ರವರು, ಪಕ್ಷದ ಕಚೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಜರುಗುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ, ಹಾಗೂ ಮತಯಾಚನೆ ಕಾರ್ಯಕ್ರಮದಲ್ಲಿ ಸಿಎಂ ಮತ್ತು ಡಿಕೆಶಿ ರವರು. ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರು ಸೇರಿದಂತೆ, ವಿವಿದ ಇಲಾಖೆಗಳ ಸಚಿವರು ಮತ್ತು ಕಾಂಗ್ರೇಸ್ ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳು, ಪಕ್ಷದ ಹಿರಿಯ ಮುಖಂಡರು ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಸಮಸ್ತ ಅಭಿಮಾನಿಗಳಿಗೆ, ಸಿಎಂ ಮತ್ತು ಡಿಕೆಶಿ ರವರ ಸಮಸ್ತ ಅಭಿಮಾನಿಗಳಿಗೆ. ಅಖಂಡ ಜಿಲ್ಲೆಯ ಪಕ್ಷದ ಸರ್ವ ಪದಾಧಿಕಾರಿಗಳಿಗೆ, ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಈ ಮೂಲಕ ಮುಕ್ತ ಆಹ್ವಾನ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಕೂಡ್ಲಿಗಿ ಪಟ್ಟಣ ಸೇರಿದಂತೆ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಸಮಸ್ತ ಕಾರ್ಯಕರ್ತರು , ಏ29ರ ಬಹಿರಂಗ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಈ ಮೂಲಕ ಕೋರಿದ್ದಾರೆ. ಮೂಲ ಭೂತಸೌಕರ್ಯಗಳಿಗೆ ಪ್ರಥಮ ಆದ್ಯತೆ-ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆಲ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ, ಶಾಸಕರಾದ ಡಾ ಎನ್.ಟಿ.ಶ್ರೀನಿವಾಸ್ ಉತ್ತರಿಸಿದರು.
ತಾವು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ, ಸರ್ಕಾರದಿಂದ ಸಾಕಷ್ಟು ಅನುದಾನ ಮಂಜೂರು ಮಾಡಿಸುತ್ತಿರುವುದಾಗಿ ತಿಳಿಸಿದರು. ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಪ್ರಥಮ ಆಧ್ಯತೆ ನೀಡಿದ್ದು, ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಅವರು ಮನವರಿಕೆ ಮಾಡಿಕೊಟ್ಟರು.