ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆಯ ಸಂದರ್ಭವನ್ನೇ ಬಳಸಿಕೊಂಡು ಗ್ರಾಮ ಪಂಚಾಯಿತಿಯ 15ನೇಯ ಹಣಕಾಸಿನ ಅನುದಾನದಲ್ಲಿ ಯಾವುದೇ ಟೆಂಡರ್ ಕರೆಯದೆ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಹಣವನ್ನು ವಂಚಿಸಿ ಬರೋಬರಿ 4 ಅಂಗಡಿ ಮಳಿಗೆಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶ್ರೀಧರ್ ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಈರಯ್ಯ 20 ಲಕ್ಷದ ಮೊತ್ತದ ಕಾಮಗಾರಿಗೆ ಯಾವುದೇ ಟೆಂಡರ್ ಕರೆಯದೆ ಸರ್ಕಾರದ ಬೊಕ್ಕಸಕ್ಕೆ ಪಂಗನಾಮ ಹಾಕಿ ಕಾಮಗಾರಿ ನಿರ್ಮಾಣ ಮಾಡುತ್ತಿದ್ದಾರೆ.
ಪಂಚಾಯತ್ ರಾಜ್ ಇಲಾಖೆಯ ನಿಯಮದ ಪ್ರಕಾರ 5 ಲಕ್ಷಕ್ಕಿಂತ ಹೆಚ್ಚು ಮೊತ್ತದ ಹಣವನ್ನು ಕಾಮಗಾರಿಗಳಿಗೆ ಬಳಕೆ ಮಾಡಬೇಕಾದರೆ ಕಡ್ಡಾಯವಾಗಿ ಟೆಂಡರ್ ಕರೆಯಲೇಬೇಕು ಸರ್ಕಾರಕ್ಕೆ ಇಂತಿಷ್ಟು ಎಂದು ಟೆಂಡರ್ ಆದ ಬಳಿಕ ತೆರಿಗೆ ಹಣ ಪಾವತಿಸಬೇಕು ಆದರೆ ಹಣದ ಆಸೆಗೆ ಇಂಜಿನಿಯರ್ ಈರಯ್ಯ ಮತ್ತು ಪಿ ಡಿ ಓ ಶ್ರೀಧರ್ ಎಂಬುವವರು ಅಹಲ್ಯಾ ಗ್ರಾಮದ ಗುತ್ತಿಗೆದಾರ ಸೋಮಣ್ಣ ಎಂಬುವರಿಗೆ ಅನಧಿಕೃತವಾಗಿ ಕಾಮಗಾರಿ ನಿರ್ಮಾಣ ಮಾಡಲು ಆದೇಶ ಮಾಡಿ ಈಗಾಗಲೇ ಕಾಮಗಾರಿ ಕಾನೂನುಬಾಹಿರವಾಗಿ ಅರ್ಧಕ್ಕೆ ಬಂದು ನಿಂತಿದೆ.
ಆರ್ ಟಿ ಐ ಕಾರ್ಯಕರ್ತ ಚಂದ್ರು ಮಾತನಾಡಿ, ಟೆಂಡರ್ ಇಲ್ಲದೆ 20 ಲಕ್ಷ ಮೊತ್ತದ ಅಂಗಡಿ ಮಳಿಗೆ ಕಾಮಗಾರಿ ಹೇಗೆ ನಡೆಯುತ್ತಿದೆ ಎಂದು ಪ್ರಶ್ನಿಸಿದರು. ಲೋಕಸಭಾ ಚುನಾವಣೆಯ ನೀತಿ ಸಂಹಿತೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ಟೋಪಿ ಹಾಕಿ ಕಾಮಗಾರಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.