ಸಮಗ್ರ ನ್ಯೂಸ್ : ಹಳೆ ಪಿಂಚಣಿ ಮರು ಜಾರಿ ಮಾಡುವ ಭರವಸೆ ಕೊಟ್ಟು ಮತ ಪಡೆದ ಎಸ್.ಎಲ್.ಭೋಜೆಗೌಡ ಅವರು, ಆ ಬಗ್ಗೆ ಸಣ್ಣ ಪ್ರಯತ್ನ ಕೂಡ ಮಾಡಿಲ್ಲ. ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ನೈತಿಕತೆ ಇಲ್ಲ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋಜೆಗೌಡರಿಗೆ ತಾನು ಯಾವ ಪಕ್ಷದ ಅಭ್ಯರ್ಥಿ ಎಂದು ಧೈರ್ಯದಿಂದ ಹೇಳುವ ಸಾಮರ್ಥ್ಯ ಕೂಡ ಇಲ್ಲ. ಇವರು ಮೈತ್ರಿ ಅಭ್ಯರ್ಥಿಯೇ ಅಥವಾ ಬಿಜೆಪಿ ಅಭ್ಯರ್ಥಿಯೇ ಎಂಬ ಗೊಂದಲದಲ್ಲಿ ಇದ್ದಾರೆ ಎಂದು ಟೀಕಿಸಿದರು.
ಜೂನ್ ಮೊದಲ ವಾರದಲ್ಲಿ ನಡೆಯಲಿರುವ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಐತಿಹಾಸಿಕ ಚುನಾವಣೆ ಆಗಲಿದ್ದು, ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರೇ ಆಯ್ಕೆ ಆಗಬೇಕೆಂಬುದು ಮತದಾರರ ಅಪೇಕ್ಷೆಯಾಗಿದೆ. ಶಿಕ್ಷಕರ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಲು ನಾವು ಕಟಿ ಬದ್ಧರಾಗಿದ್ದೇವೆ ಎಂದರು.
ಹೊಸ ಪಿಂಚಣಿ ಯೋಜನೆ ಅನುಪಯುಕ್ತವಾಗಿದೆ. ನಮ್ಮ ಸರಕಾರ ಅಧಿಕಾರ ದಲ್ಲಿರುವುದರಿಂದ ಹೊಸ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಲಾಗುವುದು. ಈ ವಿಚಾರವನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರೊಂದಿಗೆ ಜೊತೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಚೇರಿಯನ್, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ ಉಪಸ್ಥಿತರಿದ್ದರು