ಸಮಗ್ರ ನ್ಯೂಸ್: ಮದ್ಯ ನೀತಿ ಹಗರಣದ ಆರೋಪದಲ್ಲಿ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ವರ್ಕ್ ಪ್ರಮ್ ಜೈಲ್‍ಗೆ ಅವಕಾಶ ನೀಡಬೇಕು ಎಂದು ದೆಹಲಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯನ್ನು ವಕೀಲ ಶ್ರೀಕಾಂತ್ ಪ್ರಸಾದ್ ಅವರು ಹೈಕೋರ್ಟ್‍ಗೆ ಸಲ್ಲಿಸಿದ್ದಾರೆ. ಜೈಲಿನಿಂದ ಸರ್ಕಾರ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ತಿಹಾರ್ ಜೈಲಿನ ಡಿಜಿಗೆ ನಿರ್ದೇಶನ ನೀಡಬೇಕು ಎಂದು ಅವರು ಕೋರ್ಟ್‍ಗೆ ಒತ್ತಾಯಿಸಿದ್ದು, ಅರ್ಜಿಯ ವಿಚಾರಣೆ ನಡೆಸಬೇಕೆ ಅಥವಾ ಬೇಡವೇ ಎಂಬುದನ್ನು ನ್ಯಾಯಾಲಯ ಇನ್ನೂ ನಿರ್ಧರಿಸಿಲ್ಲ.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‍ಗೆ ಜೈಲಿನಲ್ಲಿಯೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜೈಲು ಡಿಜಿಗೆ ನ್ಯಾಯಾಲಯ ನಿರ್ದೇಶಿಸಬೇಕು. ಇದರಿಂದಾಗಿ ದೆಹಲಿಯ ಶಾಸಕರು ಮತ್ತು ಸಚಿವರೊಂದಿಗೆ ವಿಡಿಯೋ ಕಾನ್ಸರೆನ್ಸಿಂಗ್ ಮೂಲಕ ಮಾತನಾಡಬಹುದು ಎಂದು ಶ್ರೀಕಾಂತ್ ಪ್ರಸಾದ್ ಮನವಿಯಲ್ಲಿ ತಿಳಿಸಿದ್ದಾರೆ.
ದೆಹಲಿಯ ಪ್ರಸ್ತುತ ಪರಿಸ್ಥಿತಿಯು ಸಂವಿಧಾನದ 21, 14 ಮತ್ತು 19 ನೇ ವಿಧಿ ಅಡಿಯಲ್ಲಿ ನಾಗರಿಕರಿಗೆ ನೀಡಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಶ್ರೀಕಾಂತ್ ಪ್ರಸಾದ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ದೆಹಲಿಯಲ್ಲಿ ಆರೋಗ್ಯ ಮತ್ತು ಶಿಕ್ಷಣದ ದಾಖಲೆ ಅತ್ಯುತ್ತಮವಾಗಿದೆ. ಭಾರತದ ಸಂವಿಧಾನ ಅಥವಾ ಯಾವುದೇ ಕಾನೂನು ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನಿಯನ್ನು ಸರ್ಕಾರ ನಡೆಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ದೆಹಲಿ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿರುವ ಆದರೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದ ಬಡವರು ಮತ್ತು ವಂಚಿತ ಜನರ ಪರವಾಗಿ ನಾನು ನ್ಯಾಯಾಲಯದ ಬಾಗಿಲು ತಟ್ಟುತ್ತಿದ್ದೇನೆ. ರಾಜಕೀಯ ದುರುದ್ದೇಶದಿಂದ ಕೇಜ್ರಿವಾಲ್ ಜೈಲು ಸೇರಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ ಅರ್ಜಿಯನ್ನು ಶೀಘ್ರವಾಗಿ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.