ಸಮಗ್ರ ನ್ಯೂಸ್ : ಚಾಮರಾಜನಗರ ಜಿಲ್ಲೆಯ ಹನೂರು ಗುಂಡಿಮಾಳ ಗ್ರಾಮದಿಂದ ಹೊಸಪೋಡು ಗ್ರಾಮಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಒಡೆಯರ ಪಾಳ್ಯ ಸಮೀಪದ ಹೊಸ ಪೋಡು ಗ್ರಾಮದ ಈರಾ (61) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಕಾರ್ಯನಿಮಿತ್ತ ಒಡೆಯರ ಪಾಳ್ಯ ಗ್ರಾಮಕ್ಕೆ ಆಗಮಿಸಿದ್ದ ಹೊಸ ಫೋಡು ಗ್ರಾಮದ ನಿವಾಸಿ ಈರ ಎಂಬಾತ ಕೆಲಸ ಮುಗಿದ ಮೇಲೆ ಗುಂಡಿಮಾಳದ ವರಗೆ ಬಸ್ ನಲ್ಲಿ ಪ್ರಯಾಣಿಸಿ ನಂತರ ಹೊಸ ಪೋಡು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಬುಧವಾರ ಒಡೆಯರಪಾಳ್ಯ ಗ್ರಾಮಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಈರ ಗುರುವಾರ ಬೆಳಗ್ಗೆ ಆದರೂ ಬಾರದೇ ಇರುವುದರಿಂದ ಕುಟುಂಬಸ್ಥರು ಅರಣ್ಯದಲ್ಲಿ ಹುಡುಕುತ್ತಿದ್ದ ವೇಳೆ ಶವ ಪತ್ತೇಯಾಗಿದೆ. ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ . ಮಾಹಿತಿ ಪಡೆದ ಹನೂರು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಘಟನಾಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.