Ad Widget .

ಚುನಾವಣೆ ವೇಳೆ ಜಪ್ತಿ ಮಾಡಲಾಗುವ ಹಣ, ಒಡವೆ, ಮದ್ಯ ಎಲ್ಲಿಗೆ ಹೋಗುತ್ತೆ?|ವಶ ಪಡಿಸಿಕೊಂಡ ಹಣ ವಾಪಸ್ ಪಡೆಯಬಹುದಾ?

ಸಮಗ್ರ ನ್ಯೂಸ್: ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ದೊಡ್ಡ ಮೊತ್ತದ ಹಣವನ್ನು ವಾಹನಗಳಲ್ಲಿ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಹೈವೇಗಳಲ್ಲಿ, ಗಡಿ ಭಾಗದಲ್ಲಿ, ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿ ತಪಾಸಣೆ ಮಾಡಲಾಗುತ್ತಿರುತ್ತದೆ. ಮದುವೆಗೆ ಹೋಗುತ್ತಿದ್ದೇವೆ, ಆಸ್ಪತ್ರೆಯಲ್ಲಿ ಆಪರೇಷನ್ ಇದೆ. ಹೀಗಾಗಿ ಹಣ ತೆಗೆದುಕೊಂಡು ಹೋಗುತ್ತಿದ್ದೀವಿ ಎಂದರೂ ಅಧಿಕಾರಿಗಳು ಬಿಡುವುದಿಲ್ಲ. ಹಣ ನಿಮ್ಮದು ಎನ್ನಲು ಪುರಾವೆ ನೀಡಿ ಎನ್ನುತ್ತಾರೆ. ಈ ರೀತಿ ಚುನಾವಣೆ ವೇಳೆ ಜಪ್ತಿ ಮಾಡಲಾಗುವ ಹಣ, ನಗದು, ಮದ್ಯವನ್ನು ಏನು ಮಾಡಲಾಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಿದರೆ, ಅದಕ್ಕೆ ಉತ್ತರ ಇಲ್ಲಿದೆ.

Ad Widget . Ad Widget .

ಇಡೀ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ 2024 ಕದನ ರಂಗೇರಿದೆ. ಇದೇ ಏಪ್ರಿಲ್ 26ರಿಂದ ಜೂನ್ 04ರ ವರೆಗೆ ದೇಶದಲ್ಲಿ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಹಾಗೂ ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಯಾದ ದಿನವೇ ಅಂದರೆ ಮಾರ್ಚ್ 16ರ ಸಂಜೆಯಿಂದಲೇ ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು ಭದ್ರತಾ ಪಡೆಗಳು ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲಲ್ಲಿ ಚೆಕ್ ಪೋಸ್ಟ್​ಗಳನ್ನು ಹಾಕಿ ಹದ್ದಿನ ಕಣ್ಣಿಟ್ಟಿದ್ದಾರೆ. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ತಪಾಸಣೆ ನಡೆಯುತ್ತಿದೆ. ಹೈವೇಗಳಲ್ಲಿ ಸಾಗುವ ಪ್ರತಿಯೊಂದು ಬೈಕು, ಕಾರು, ಬಸ್, ಲಾರಿ ಸೇರಿದಂತೆ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಈ ರೀತಿ ತಪಾಸಣೆ ಮಾಡುವಾಗ ವಶಪಡಿಸಿಕೊಳ್ಳಲಾಗುವ ಹಣ, ಒಡವೆ ಮತ್ತು ಮದ್ಯವನ್ನು ಚುನಾವಣಾ ಆಯೋಗ ಮತ್ತು ಪೊಲೀಸರು ಏನು ಮಾಡುತ್ತಾರೆ ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡುವುದು ಸಹಜ. 

Ad Widget . Ad Widget .

ಒಬ್ಬ ಅಭ್ಯರ್ಥಿಯ ಚುನಾವಣಾ ಖರ್ಚು ಎಷ್ಟು?

ಚುನಾವಣೆ ಬಂತೆಂದರೆ ಸಾಕು ಹಣದ ಹೊಳೆಯೇ ಹರಿಯುತ್ತೆ. ವಿಧಾನಸಭೆ ಚುನಾವಣೆಯೇ ಆಗಲಿ, ಲೋಕಸಭಾ ಚುನಾವಣೆಯೇ ಆಗಲಿ, ಯಾವುದಕ್ಕೂ ಭೇದ ಭಾವ ಇಲ್ಲದೆ ಚುನಾವಣಾ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸುತ್ತಾರೆ. ಇದು ನಮಗೆಲ್ಲಾ ತಿಳಿದಿರುವ ವಿಷಯ. ಜೊತೆಗೆ ಮತದಾರರಿಗೆ ಈ ರೀತಿ ಹಣ, ಹೆಂಡ ಕೊಡುವ ವಿಷಯದಲ್ಲಿ ಇಡೀ ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಚುನಾವಣೆ ಆಯೋಗದ ನಿಯಮವನ್ನೂ ಗಾಳಿಗೆ ತೂರಿ, ಮತದಾರರನ್ನು ಸೆಳೆಯಲು ಕಳ್ಳ ಮಾರ್ಗದಲ್ಲಿ ಹೆಚ್ಚಿನ ಹಣ ವ್ಯಯಿಸುತ್ತಾರೆ. ಹೀಗಾಗಿ ಚುನಾವಣಾ ಆಯೋಗ ಅಭ್ಯರ್ಥಿ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಯ ಮೇಲೂ ಕಣ್ಣಿಡುತ್ತೆ. ಚುನಾವಣಾ ಆಯೋಗವು ನಿಗದಿಪಡಿಸಿದ ನಿಯಮಗಳ ಪ್ರಕಾರ ಲೋಕಸಭಾ ಕ್ಷೇತ್ರ ದೊಡ್ಡದಾಗಿದ್ದರೆ ಅಭ್ಯರ್ಥಿಯು 95 ಲಕ್ಷದ ವರೆಗೆ ಹಣ ಖರ್ಚು ಮಾಡಬಹುದು.

 ಅದೇ ಚಿಕ್ಕ ಲೋಕಸಭಾ ಕ್ಷೇತ್ರವಾದ್ರೆ 75 ಲಕ್ಷ ರೂ. ವರೆಗೆ ಮಾತ್ರ ಖರ್ಚು ಮಾಡಬೇಕು. ಆಯೋಗ ನಿಗದಿ ಪಡಿಸಿರುವ ವೆಚ್ಚಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತೆ. ಅಭ್ಯರ್ಥಿ ಪ್ರತ್ಯೇಕ ಖಾತೆ ತೆರೆದು ಚುನಾವಣೆ ಖರ್ಚಿನ ಲೆಕ್ಕವಿಡಬೇಕು. ಅಲ್ಲದೆ ಪ್ರಚಾರದ ವೇಳೆ ಕಾರ್ಯಕರ್ತರ ಟೀ-ಕಾಫಿ, ಊಟದ ವೆಚ್ಚುವನ್ನೂ ಕೂಡ ಚುನಾವಣೆ ಆಯೋಗಕ್ಕೆ ಸಲ್ಲಿಸಬೇಕು. ಹಾಗೂ ಚುನಾವಣಾ ಆಯೋಗ ಪ್ರತ್ಯೇಕ ಸದಸ್ಯರನ್ನು ನೇಮಿಸಿ ಪ್ರಚಾರದ ವೇಳೆ ಬಳಸಲಾಗುವ ವಸ್ತುಗಳು, ಸಭೆಗಳಲ್ಲಿ ನೀಡಲಾಗುವ ಹೂಗುಚ್ಛ ಸೇರಿದಂತೆ ಪ್ರತಿಯೊಂದು ವಸ್ತುವಿನ ಚಿತ್ರೀಕರಣ ಮಾಡಿಸುತ್ತೆ. ಈ ಮೂಲಕ ಅಭ್ಯರ್ಥಿ ಖರ್ಚಿನ ಮೇಲೆ ನಿಗಾ ಇಡುತ್ತೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಹೆಸರನ್ನು ಪಕ್ಷ ಘೋಷಣೆ ಮಾಡುತ್ತಿದ್ದಂತೆಯೇ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಒಂದು ವೋಟಿಗೆ ಇಷ್ಟು ಎಂದು ಹಣ ಎಂದು ಹಂಚುತ್ತಾರೆ, ಮದ್ಯ, ಒಡವೆ, ಪಾತ್ರೆ ಸಾಮಾನುಗಳು, ದಿನಸಿ, ದಿನ ನಿತ್ಯ ಬಳಕೆಯಾಗುವ ವಸ್ತುಗಳು, ಟಿವಿ, ಕುಕ್ಕರ್, ಮಿಕ್ಸರ್, ಸೀರೆ, ಚೂಡಿದಾರ್, ಪ್ಯಾಂಟ್-ಶರ್ಟ್, ಡಿಜಿಟಲ್ ವಾಚುಗಳು, ತಂಬಾಕು, ಗುಡ್ಕ ಸೇರಿದಂತೆ ಅನೇಕ ವಸ್ತುಗಳನ್ನು ನೀಡಿ ಆಮಿಷವೊಡ್ಡುತ್ತಾರೆ ಎಂದು ಕರ್ನಾಟಕದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದರು. ಈ ರೀತಿಯ ಆಫರ್​ ನೀಡಲಾಗುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಲಬುರಗಿ ಜಿಲ್ಲೆಗಳು ಇಡೀ ರಾಜ್ಯದಲ್ಲೇ  ಅಗ್ರಸ್ಥಾನದಲ್ಲಿವೆ. ಇನ್ನು ಗಮನಿಸುವ ವಿಷಯವೆಂದರೆ ಈ ಬಾರಿ ದಿನಸಿ ವಸ್ತುಗಳು ಹೆಚ್ಚಾಗಿ ಜಪ್ತಿಯಾಗಿವೆ. ಫುಡ್ ಕಿಟ್​ಗಳು, ತರಕಾರಿ, ಅಕ್ಕಿ, ಬೇಳೆ, ಟೊಮೆಟೋ ಸಾಸ್, ತಂಬಾಕು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬೀದರ್ ಜಿಲ್ಲೆಯಲ್ಲಿ 10 ಲಕ್ಷ ಮೌಲ್ಯದ 4,000 ಕೆಜಿ ತೂಕದ ಅಪಾರ ಪ್ರಮಾಣದ ಪಾನ್ ಮಸಾಲಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 24 ಲಕ್ಷ ಮೌಲ್ಯದ 96 ದುಬಾರಿ ವಾಚ್‌ಗಳನ್ನು ಚಿಕ್ಕಬಳ್ಳಾಪುರ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಾರ್ಚ್ 22 ರಂದು ಬಳ್ಳಾರಿ ಕ್ಷೇತ್ರದಲ್ಲಿ 30 ಲಕ್ಷ ಮೌಲ್ಯದ 203 ಕೆಜಿ ಶ್ರೀಗಂಧವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಎಫ್‌ಐಆರ್ ದಾಖಲಾಗಿದ್ದು, 11 ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದೆ.

ಜೊತೆಗೆ ಬಹುತೇಕ ಬಾರಿ ಒಂದು ಪಕ್ಷ ಮತ್ತೊಂದು ಪಕ್ಷಕ್ಕೆ ಅಥವಾ ಅಭ್ಯರ್ಥಿಯಿಂದ ಕಾರ್ಯಕರ್ತರ ಕೈಗೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆಯಾಗುತ್ತೆ. ಈ ಅಕ್ರಮಗಳು ಜರುಗದಂತೆ ನೋಡಿಕೊಳ್ಳಲು, ವಾಹನಗಳಲ್ಲಿ ಸಾಗಿಸಲಾಗುವ ಹಣ, ಮದ್ಯ, ಒಡವೆಯನ್ನು ಅಧಿಕಾರಿಗಳು ಸೀಜ್ ಮಾಡುತ್ತಾರೆ. ಅಲ್ಲದೆ ಚುನಾವಣೆಯಲ್ಲಿ ಕಪ್ಪು ಹಣವನ್ನು ಬಳಸಲಾಗುತ್ತೆ. ಹೀಗಾಗಿ ಅಧಿಕಾರಿಗಳು ಹದ್ದಿನ ಕಣ್ಣಿಡುತ್ತಾರೆ.

ರಾಜ್ಯದಲ್ಲಿ ಈವರೆಗೆ 355 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ

ಸದ್ಯ ಲೋಕಸಭಾ ಚುನಾವಣೆ ಹಿನ್ನೆಲೆ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಕರ್ನಾಟಕದಲ್ಲಿ ಏಪ್ರಿಲ್ 14ರ ವರೆಗೆ 345 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಪ್ರಸಕ್ತ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.16ರಿಂದ ಏಪ್ರಿಲ್ 14ರ ವರೆಗೆ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಆದಾಯ ತೆರಿಗೆ, ಅಬಕಾರಿ ಅಧಿಕಾರಿಗಳು ರಾಜ್ಯದಲ್ಲಿ ಒಟ್ಟು 355.78 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ ಶೇ.49ರಷ್ಟು ಸ್ವತ್ತುಗಳನ್ನು ಸೂಕ್ತ ದಾಖಲೆ ಪತ್ರ ಆಧರಿಸಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು. ಈವರೆಗೂ ನಡೆದಿರುವ 17 ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದ ನಗದು, ಮದ್ಯ, ಡ್ರಗ್ಸ್ ಪತ್ತೆಯಾಗಿರಲಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ನಗದು, ಮದ್ಯ, ಡ್ರಗ್ಸ್, ಬೆಲೆ ಬಾಳುವ ಲೋಹ, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿರುವ ಪ್ರಕರಣಗಳಿಗೆ ಸಂಬಂಸಿದಂತೆ 1707 ಎಫ್‍ಐಆರ್​ಗಳು ದಾಖಲಾಗಿವೆ. ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 2,200 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 2,828 ಪುಕರಣ ದಾಖಲಿಸಿದೆ. NDPS ಅಡಿಯಲ್ಲಿ 125 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15(a) ಅಡಿಯಲ್ಲಿ 15,013 ಪ್ರಕರಣಗಳನ್ನು ದಾಖಲಿಸಿದೆ. ಮತ್ತು 1,349 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಇಲಾಖೆಯವರು 23,46,000 ರೂ. ಮೌಲ್ಯದ 1,150 ಕೇಸ್ ಪೆಟ್ಟಿಗೆಗಳ ಮದ್ಯವನ್ನು (8,970 Itrs ಬಿಯರ್) KSBCL Depo, ಕೊತ್ತೂರು, ಕಮ್ಮಸಂದ್ರ ಗ್ರಾಮ, ವಿರ್ಗೊ ನಗರ ಅಂಚೆ, ಬೀದರಹಳ್ಳಿ ಹೋಬಳಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ, ಇಲ್ಲಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು 49,88,275 ರೂ. ಮೌಲ್ಯದ 1,150 ಕೇಸ್ ಪೆಟ್ಟಿಗೆಗಳ ಮದ್ಯವನ್ನು (9,108 Itrs ಬಿಯರ್) KSBCL Depo-1, ಕೆ.ಜಿ ಹಳ್ಳಿ, ನಿವೇಶನ ಸಂಖ್ಯೆ.76,77 ಮತ್ತು 78, ಕಾಡುಗೊಂಡನಹಳ್ಳಿ, ಕಸಬಾ ಹೋಬಳಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು ರೂ.46,14,064/- ಮೌಲ್ಯದ 13,800 Itrs ಬಿಯರ್‌ನು, KSBCL Depo-2, ಕೆ.ಜಿ ಹಳ್ಳಿ, ನಿವೇಶನ ಸಂಖ್ಯೆ.76,77 ಮತ್ತು 78, ಕಾಡುಗೊಂಡನಹಳ್ಳಿ, ಕಸಬಾ ಹೋಬಳಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ,ಇಲ್ಲಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು ರೂ.89,25,507/- ಮೌಲ್ಯದ 1,186.200 Itrs(IML) ಮದ್ಯವನ್ನು, KSBCL Depo-2, ಕೆ.ಜಿ ಹಳ್ಳಿ, ನಿವೇಶನ ಸಂಖ್ಯೆ.76,77 ಮತ್ತು 78, ಕಾಡುಗೊಂಡನಹಳ್ಳಿ, ಕಸಬಾ ಹೋಬಳಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ,ಇಲ್ಲಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು ರೂ.55,62,739/- ಮೌಲ್ಯದ 7386.120 Itrs((ML) ಮದ್ಯವನ್ನು, KSBCL Depo ದೊಡ್ಡಕಮ್ಮನಹಳ್ಳಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಇಲ್ಲಿ ವಶಪಡಿಸಿಕೊಂಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಜಪ್ತಿ ಮಾಡಲಾದ ಹಣ ಎಲ್ಲಿಗೆ ಹೋಗುತ್ತೆ?

ಈ ಹಿಂದೆ ಹೇಳಿದಂತೆ ಚುನಾವಣಾ ದಿನಾಂಕ ಮತ್ತು ಅಭ್ಯರ್ಥಿಯ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಪ್ರಚಾರ ಆರಂಭಿಸುತ್ತಾರೆ. ಹತ್ತಾರು ಬಾರಿ ಸಭೆ, ಸಮಾಲೋಚನೆಗಳನ್ನು ನಡೆಸುತ್ತಾರೆ. ರ್‍ಯಾಲಿಗಳು, ಮತದಾರರಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇಂತಹ ಸಮಯದಲ್ಲಿ ಅಕ್ರಮ ನಗದು, ಚಿನ್ನ, ಮದ್ಯ ಮತ್ತು ಕಪ್ಪು ಹಣ ಸಾಗಿಸಲಾಗುತ್ತೆ. ಹೀಗಾಗಿ ಪೊಲೀಸರು ಚುನಾವಣಾ ಸಮಯದಲ್ಲಿ ಹೈ ಅಲರ್ಟ್ ಆಗುತ್ತಾರೆ. ಅನುಮಾನ ಬರುವ ವಾಹನಗಳು ಹಾಗೂ ಜನರನ್ನು ನಿಲ್ಲಿಸಿ ತಪಾಸಣೆ ನಡೆಸಿ ವಿಚಾರಣೆ ನಡೆಸುತ್ತಾರೆ.

ಇನ್ನು ಮಾಹಿತಿಗಳ ಪ್ರಕಾರ ಚುನಾವಣೆ ಸಂದರ್ಭದಲ್ಲಿ ಜಪ್ತಿ ಮಾಡಲಾದ ಮದ್ಯವನ್ನು ಒಂದು ಕಡೆ ಶೇಖರಿಸಿ ಇಟ್ಟು ಕೊನೆಗೆ ಅಷ್ಟನ್ನೂ ನಾಶಮಾಡಲಾಗುತ್ತದೆ. ರೋಡ್ ರೋಲರ್‌ನಿಂದ ಪುಡಿಮಾಡಿ ನಾಶಪಡಿಸಲಾಗುತ್ತೆ. ಅಮೆಜಾನ್ ಪ್ರೈಮ್​ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪೋಚರ್ ಸರಣಿಯಲ್ಲೂ ಕೂಡ ಅರಣ್ಯ ಅಧಿಕಾರಿಗಳು ಕೇರಳದಲ್ಲಿ ಆದ ಆನೆಯ ದಂತ ಕಳ್ಳಸಾಗಣಿಕೆ ಪ್ರಕರಣವನ್ನು ಭೇದಿಸಿ ಕೊನೆಗೆ ವಶ ಪಡಿಸಿಕೊಂಡ ದಂತವನ್ನು ನಾಶಪಡಿಸುವುದಾಗಿ ಘೋಷಿಸುತ್ತಾರೆ. ಅದೇ ರೀತಿ ಚುನಾವಣೆ ವೇಳೆ ವಶಕ್ಕೆ ಪಡೆದ ಮದ್ಯವನ್ನು ನಾಶ ಮಾಡಲಾಗುತ್ತೆ. ಇನ್ನು ನಗದು, ಆಭರಣದ ವಿಷಯಕ್ಕೆ ಬಂದರೆ ಮೊದಲಿಗೆ ಪೊಲೀಸರೇ ತಮ್ಮ ವ್ಯಾಪ್ತಿಯಲ್ಲಿ ಜಪ್ತಿಯಾದ ಹಣದ ಬಗ್ಗೆ ವಿಚಾರಣೆ ನಡೆಸುತ್ತಾರೆ. ಹಣದ ಮೂಲ ಯಾವುದು, ಅದು ಕಪ್ಪು ಹಣವೇ ಎಂದು ತನಿಖೆಗೆ ಇಳಿಯುತ್ತಾರೆ. ಹಣದ ಮೊತ್ತ ಹೆಚ್ಚಿದ್ದರೆ ಅದು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ.

ಚುನಾವಣೆ ವೇಳೆ ವಶ ಪಡಿಸಿಕೊಂಡ ಹಣ ವಾಪಸ್ ಪಡೆಯಬಹುದಾ?

ಚುನಾವಣೆ ಸಂದರ್ಭದಲ್ಲಿ ಪೊಲೀಸರು, ಅಧಿಕಾರಿಗಳು ವಶಕ್ಕೆ ಪಡೆದ ನಗದು, ಆಭರಣಗಳನ್ನು ಕ್ಲೈಮ್ ಮಾಡಿಕೊಳ್ಳಬಹುದು. ಆದರೆ ಆ ಹಣ ತನ್ನದು ಎಂದು ಸಾಬೀತುಪಡಿಸಬೇಕಾಗುತ್ತೆ. ಮೊದಲಿಗೆ ಹಣ ಅಥವಾ ಒಡವೆ ಜಪ್ತಿ ಮಾಡಿ, ಅದನ್ನು ಆಧಾರವಿಲ್ಲದ ಹಣ ಎಂದು ಕೇಸ್ ಹಾಕಲಾಗುತ್ತೆ. ಎಫ್​ಐಆರ್ ದಾಖಲಾಗುತ್ತೆ. ಹೀಗಾಗಿ ಈ ಪ್ರಕರಣ ಕೋಟಿಗೆ ಹೋಗುತ್ತೆ. ಬಳಿಕ ವ್ಯಕ್ತಿ ಆ ಹಣಕ್ಕೆ ಅಥವಾ ಆ ಒಡವೆಗೆ ಸರಿಯಾದ ಆಧಾರವನ್ನು ಸಲ್ಲಿಸಿ ಇದು ಅಕ್ರಮವಾಗಿ ಗಳಿಸಿದಲ್ಲ, ಅಥವಾ ಯಾವ ಪಕ್ಷದ ಹಣವೂ ಅಲ್ಲ ಎಂದು ಸಂಪೂರ್ಣ ಮಾಹಿತಿಯನ್ನು ಪುರಾವೆಯಾಗಿ ಸಲ್ಲಿಸಿದ ನಂತರ ಹಣ, ಒಡವೆಯನ್ನು ಇಲಾಖೆ ಹಿಂತಿರುಗಿಸುತ್ತದೆ. ಸುಮಾರು ಒಂದು ವಾರಗಳ ಕಾಲ ಕೋರ್ಟ್​ನಲ್ಲಿ ಚರ್ಚೆ, ದಾಖಲೆಗಳ ಪರಿಶೀಲನೆ ಬಳಿಕ ನಿಮ್ಮ ವಸ್ತುಗಳು ನಿಮ್ಮ ಕೈ ಸೇರುತ್ತವೆ. ಆದರೆ ಮುಟ್ಟುಗೋಲು ಹಾಕಿಕೊಂಡ ಹಣವನ್ನು ಯಾರೂ ಕ್ಲೇಮ್ ಮಾಡದಿದ್ದಲ್ಲಿ ಅದು ಸರ್ಕಾರದ ಖಜಾನೆಗೆ ಜಮೆಯಾಗುತ್ತದೆ. ವ್ಯಕ್ತಿಯು ಸಂಪೂರ್ಣ ಮಾಹಿತಿಯನ್ನು ಪುರಾವೆಯಾಗಿ ಪ್ರಸ್ತುತಪಡಿಸಿದರೆ ಮಾತ್ರ ಹಣವನ್ನು ಹಿಂತಿರುಗಿಸಲಾಗುತ್ತದೆ. ಪುರಾವೆಗಾಗಿ, ಎಟಿಎಂ ವಹಿವಾಟು, ಬ್ಯಾಂಕ್ ರಸೀದಿ ಮತ್ತು ಪಾಸ್‌ಬುಕ್‌ನಲ್ಲಿ ನಿಖರ ಮಾಹಿತಿಯನ್ನು ಹೊಂದಿರಬೇಕು. ಲೋಕಸಭಾ, ವಿಧಾನಸಭಾ ಯಾವುದೇ ಚುನಾವಣೆಯಾದರೂ ಇದೇ ನಿಯಮ ಅನ್ವಯವಾಗುತ್ತದೆ.

Leave a Comment

Your email address will not be published. Required fields are marked *