ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಚಾರ ಕಾರ್ಯ ಜೋರಾಗಿದೆ. ಈ ನಡುವೆ ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಬಿಲ್ಲವ ಮತಗಳೇ ನಿರ್ಣಾಯಕವಾಗಿದ್ದು, ಬಿಲ್ಲವ ವೋಟ್ ಛಿದ್ರವಾಗದಂತೆ ಮತಗಳನ್ನು ಭದ್ರಪಡಿಸಲು ಬಿಜೆಪಿ – – ಕಾಂಗ್ರೆಸ್ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.
ಇದೇ ಸ್ಟ್ರಾಟಜಿಯನ್ನು ಮುಂದುವರಿಸಿರುವ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರಿಂದ ರೋಡ್ ಶೋನಲ್ಲಿ ನಾರಾಯಣ ಗುರುಗಳಿಗೆ ಗೌರವ ಸಹ ನೀಡಲಾಗಿದೆ. ಬಿಜೆಪಿಗೆ ಬಿಲ್ಲವ ಸಮಾಜದ ಪ್ರಭಾವಿ ನಾಯಕ ಪದ್ಮರಾಜ್ ಕಾಂಗ್ರೆಸ್ ನ ಅಭ್ಯರ್ಥಿಯಾಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪದ್ಮರಾಜ್ ರಿಂದಾಗಿ ಮತಕ್ಷೇತ್ರದಲ್ಲಿ ಇರುವ 4.5 ಲಕ್ಷ ಬಿಲ್ಲವ ವೋಟ್ ಒಂದೆಡೆ ವಾಲುವ ಭೀತಿಯಲ್ಲಿ ಬಿಜೆಪಿ ಇದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜಾತಿ ಸಮೀಕರಣ ವರ್ಕೌಟ್ ಆಗುತ್ತಿದ್ದು, ಇದರಿಂದಾಗಿ ನರೇಂದ್ರ ಮೋದಿ ಭೇಟಿ ಬಳಿಕ ಜಾತಿ ಲೆಕ್ಕಾಚಾರ ಬದಲಾಗುತ್ತದೆಯೇ ಎನ್ನುವ ಚರ್ಚೆ ನಡೆಯುತ್ತಿದೆ.
ಇನ್ನು 2014 ಮತ್ತು 2019ರ ಚುನಾವಣೆ ಗಮನಿಸಿದರೆ ಕಾಂಗ್ರೆಸ್ ಸೋಲಿನ ಅಂತರದಲ್ಲಿ ವ್ಯತ್ಯಾಸ ಆಗುತ್ತಿದೆ. ಕಳೆದ ಬಾರಿ ಬಂಟ ಅಭ್ಯರ್ಥಿಗಳಿಗೆ ಎರಡು ಪ್ರಬಲ ಪಕ್ಷಗಳು ಮಣೆಹಾಕಿದ್ದು, ಕಾಂಗ್ರೆಸ್ ನ ಮಿಥುನ್ ರೈ ಬಿಜೆಪಿಯ ನಳಿನ್ ಕುಮಾರ್ ವಿರುದ್ದ ಪೂಜಾರಿ ಸೋಲುಂಡಿದ್ದರು. ಬಂಟ ಅಭ್ಯರ್ಥಿಗಳೇ ಸ್ಪರ್ಧೆ ಮಾಡುತ್ತಿರುವುದರಿಂದ ಬಿಲ್ಲವ ವೋಟ್ ಬ್ಯಾಂಕ್ ನಲ್ಲಿ ಒಡಕು ಹೆಚ್ಚಾಗಿತ್ತು.
ಆದರೆ ಈ ಬಾರಿ ಒಡಕು ಕಾಣಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಬಿಜೆಪಿಯಿಂದ ಮತ್ತೆ ಬಂಟ ಸಮುದಾಯದ ಬ್ರಿಜೇಶ್ ಚೌಟರಿಗೆ ಟಿಕೆಟ್ ನೀಡಲಾಗಿದ್ದು, ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಹಾಗೂ ಬಿಲ್ಲವ ನಾಯಕ ಜನಾರ್ದನ ಪೂಜಾರಿಯವರ ಶಿಷ್ಯ ಹಾಗೂ ಪ್ರಬಲ ನಾಯಕ ಪದ್ಮರಾಜ್ ಪೂಜಾರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಬಿಲ್ಲವರು ಒಗ್ಗಟ್ಟು ಪ್ರದರ್ಶಿಸಿರುವ ಸಾಧ್ಯತೆಯೂ ನಿಚ್ಚಳವಾಗಿದೆ.
ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಜಿಲ್ಲೆಯಲ್ಲಿ ಬಿಲ್ಲವರಿಗೆ ಬಿಜೆಪಿ ಮೇಲೆ ನಾರಾಯಣ ಗುರುಗಳ ವಿಷಯದಲ್ಲಿ ಮುನಿಸಿದೆ ಎನ್ನಲಾಗಿದೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಸ್ಥಬ್ದಚಿತ್ರ ರದ್ದತಿ, ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಪಾಠ ಪುಸ್ತಕದಲ್ಲಿ ನಾರಾಯಣ ಗುರುಗಳ ಪಾಠಕ್ಕೆ ಕತ್ತರಿ, ವೇಣೂರು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ರೋಹಿತ್ ಚಕ್ರತೀರ್ಥರಿಗೆ ಬಿಲ್ಲವರ ವಿರೋಧದ ನಡುವೆಯೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಂದ ಆಹ್ವಾನ ಈ ಎಲ್ಲಾ ವಿಚಾರಗಳನ್ನು ಸಮುದಾಯ ಮುಖಂಡರು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ನಡುವೆ ಈ ಹಿಂದೆ ಬಿಲ್ಲವರೆಲ್ಲಾ ಬಿಲ್ಲವ ನಾಯಕರಿಗೆ ಸಪೋರ್ಟ್ ಮಾಡಬೇಕು ಎಂಬ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆಯ ವಿಡಿಯೋ ಕೂಡಾ ಮತ್ತೆ ವೈರಲ್ ಆಗುತ್ತಿದೆ.
ಬಿಲ್ಲವರ ಒಗ್ಗಟ್ಟು ಪ್ರದರ್ಶನ, ಸೌಜನ್ಯಾ ಪರ ಹೋರಾಟಗಾರರ ನೋಟಾ ಅಭಿಯಾನ ಒಂದೆಡೆಯಾದರೆ, ಎಸ್‌ಡಿಪಿಐ ಕಣದಿಂದ ಹಿಂದೆ ಸರಿದಿರುವುದರಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್ ನತ್ತ ವಾಲುವ ಸಾಧ್ಯತೆ ಹೆಚ್ಚು. ಜಾತಿ ಸಮೀಕರಣ ವಿಚಾರ ಒಂದೆಡೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರ ಚುನಾವಣಾ ಪ್ರಚಾರ ಶೈಲಿಯೂ ಬಿಜೆಪಿಯ ನಿದ್ದೆಗೆಡಿಸಿದೆ. ಈ ಹಿನ್ನಲೆಯಲ್ಲಿ ಬ್ಯಾಕ್ ಟು ಬ್ಯಾಕ್ ಗುಪ್ತಸಭೆಗಳು ಬಿಜೆಪಿ ಪಾಳಯದಲ್ಲಿ ನಡೆಯುತ್ತಿದ್ದು, ಶತಾಯ ಗತಾಯ ಅಸ್ತಿತ್ವ ಉಳಿಸಿಕೊಳ್ಳಲೇಬೇಕೆಂಬ ಕೇಸರಿಪಡೆ ಜಿದ್ದಿಗೆ ಬಿದ್ದಿದೆ. ಆದರೆ ಮತದಾರನ ತೀರ್ಮಾನ ಎ.26ರಂದು ಗೊತ್ತಾಗಲಿದೆ.