ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎ.14 ಸಂಜೆ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದು, ಏರ್ ಪೋರ್ಟ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರೊಂದಿಗೆ ಸ್ವಾಗತಿಸುವ ಸಾಲಿನಲ್ಲಿ ಹುತಾತ್ಮ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರ್ ರವರ ತಾಯಿಗೆ ಅವಕಾಶವನ್ನು ನೀಡಲಾಗಿತ್ತು.
ಈ ಭೇಟಿಯ ಅವಕಾಶ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಸಿಕ್ಕ ಗೌರವವಾಗಿದ್ದು, ತಾಯಿಗೆ ಪ್ರಧಾನಿಯವರನ್ನು ಭೇಟಿಯಾಗಿಸಲು ಅವಕಾಶ ದೊರಕಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಯಿತು. ಆದರೆ ಸದ್ಯ ಇದೇ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದು ”ಮೋದಿಯವರನ್ನು ಭೇಟಿ ಮಾಡಿಸುತ್ತೇವೆ” ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಬಿಜೆಪಿ ಮುಖಂಡರಿಗೆ ಸೌಜನ್ಯ ತಾಯಿ ನೆನಪಾಗಲಿಲ್ಲವೇ ಎಂಬ ಪ್ರಶ್ನೆ ಇದೀಗ ಚರ್ಚೆಯ ವಸ್ತು.
ಹಲವು ಜನ ಕರಾವಳಿಯಲ್ಲಿ ಹಿಂದುತ್ವದ ಹೆಸರಿನಲ್ಲಿ ಸಾವನ್ನಪ್ಪಿದ್ದಾರೆ. ಶರತ್ ಮಡಿವಾಳ ಎಂಬ ಯುವಕನ ಸಾವಿಗೆ ಬೆಲೆ ಇಲ್ವಾ? ಇಂತಹ ನಾಟಕ ಈ ತುಳುವ ಮಣ್ಣಿನಲ್ಲಿ ಅಗತ್ಯವಿಲ್ಲ ಎಂಬಿತ್ಯಾದಿ ಕಾಮೆಂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಳ್ತಂಗಡಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸುತ್ತಿರುವ ಸೌಜನ್ಯ ತಾಯಿ ಕುಸುಮಾವತಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ದಕ್ಷಿಣಕನ್ನಡ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಒತ್ತಾಯಿಸಿದ್ದರು.
ನಂತರದ ದಿನಗಳಲ್ಲಿ ದೆಹಲಿ ಚಲೋ’ ಪ್ರತಿಭಟನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಜನಾಂದೋಲನದಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಆ ಬಳಿಕ ನಮ್ಮ ನೆರವಿಗೆ ಬಂದಿಲ್ಲ. ಪ್ರಧಾನಿ ಅವರನ್ನು ಭೇಟಿ ಮಾಡಬೇಕು ಎಂಬ ಉದ್ದೇಶದಿಂದ ದೆಹಲಿಗೆ ಬಂದಿದ್ದೇವೆ’ ಮೋದಿ ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿ ಸಂಸದರು ಮತ್ತು ಶಾಸಕ ಹರೀಶ್ ಪೂಂಜಾ ಮಾತುಕೊಟ್ಟು ಮರೆತು ಬಿಟ್ಟಿದ್ದಾರೆ ಎಂದು ಸೌಜನ್ಯ ತಾಯಿ ಕುಸುಮಾವತಿ ಆಕ್ರೋಶ ವ್ಯಕ್ತಪಡಿಸಿದ್ದರು.
ಸೌಜನ್ಯಳ ನ್ಯಾಯಕ್ಕಾಗಿ ನೋಟಾ ಅಭಿಯಾನ ಆರಂಭಿಸಿರುವ ಹೋರಾಟಗಾರರು ಇದೀಗ ರಾಜಕೀಯ ನಾಯಕರಿಗೆ ಬಿಸಿ ತುಪ್ಪವಾಗಿದ್ದಾರೆ. ಈ ನಡುವೆ ಈ ಒಂದು ಬೆಳವಣಿಗೆ ಕರಾವಳಿ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಹಂತದಲ್ಲಿದೆ.