ಸಮಗ್ರ ನ್ಯೂಸ್: ಮುಂಬೈನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದೆದುರು ಏಪ್ರಿಲ್ 14 ರಂದು ನಡೆದ ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಈಗ ಸುಳಿವೊಂದು ಸಿಕ್ಕಿದೆ. ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದ ಇಬ್ಬರು ಶೂಟರ್‌ಗಳ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ದಾಳಿಯ ಹೊಣೆ ಹೊತ್ತುಕೊಂಡಿದ್ದ. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ.
ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಇಬ್ಬರೂ ಕ್ಯಾಪ್ ಧರಿಸಿರುವುದು ಕಂಡು ಬಂದಿದೆ. ಆ ಪೈಕಿ ಓರ್ವ ಬಿಳಿ ಟೀ ಶರ್ಟ್, ಕಪ್ಪು ಜಾಕೆಟ್ ಮತ್ತು ಜೀನ್ಸ್ ಧರಿಸಿದ್ದರೆ, ಇನ್ನೋರ್ವ ಕೆಂಪು ಟೀ ಶರ್ಟ್ ಮತ್ತು ಜೀನ್ಸ್ ಧರಸಿದ್ದಾನೆ. ಬೈಕ್‌ನಲ್ಲಿ ಬಂದ ಇವರು ಸಲ್ಮಾನ್ ಮನೆ ಎದುರು ಶೂಟ್ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜತೆ ನಂಟು ಹೊಂದಿದ್ದಾರೆಂದು ಶಂಕಿಸಲಾದ ಇಬ್ಬರು ವ್ಯಕ್ತಿಗಳು ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ನಾಲ್ಕು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಲ್ಮಾನ್ ಖಾನ್ ಅವರೊಂದಿಗೆ ಮಾತನಾಡಿ ರಕ್ಷಣೆಯ ಭರವಸೆ ನೀಡಿದರು. ಈ ಹಿಂದೆ ಸಲ್ಮಾನ್ ಖಾನ್ ಅವರಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿದ್ದನಂತೆ.