Ad Widget .

ಕೊಡಗಿನಲ್ಲಿ ಹೆಚ್ಚಾಗುತ್ತಿದೆ ವನ್ಯಪ್ರಾಣಿಗಳ ಉಪಟಳ|ನಾಡಿನ ಜನರ ಸ್ವಚ್ಛಂದ ಬದುಕಿಗೆ ಸ್ಪಂದಿಸದ ಸರಕಾರಗಳು|ಕಂಗಾಲಾದ ಕೊಡಗಿನ ರೈತರು

ಸಮಗ್ರ ನ್ಯೂಸ್: ಕೊಡಗಿನಲ್ಲಿ ಆನೆ ಮಾನವ ಸಂಘರ್ಷದಿಂದ ನಾಡಿನಲ್ಲಿ ಹಲವು ಜೀವಗಳು ಬಲಿಯಾಗುತ್ತಿವೆ. ಈ ಸಂಘರ್ಷ ನಿನ್ನೆ ಮೊನ್ನೆಯದಲ್ಲ, ಆದರೆ ಇದುವರೆಗೆ ಕೂಡ ಯಾವ ಸರ್ಕಾರದಿಂದಲೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ. ನಮ್ಮ ರಾಜ್ಯ ಹಲವು ಮುಖ್ಯಮಂತ್ರಿಗಳನ್ನು ಕಂಡರೂ ಅರಣ್ಯ ಸಚಿವರನ್ನು ಕಂಡರು ಈ ಸಮಸ್ಯೆಗೆ ಪರಿಹಾರವನ್ನು ಯಾರು ಕಂಡುಹಿಡಿಯಲಿಲ್ಲ. ಅರಣ್ಯದೊಳಗಿರುವ ವನ್ಯ ಪ್ರಾಣಿಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಹಾಗೆ ನಾಡಿನಲ್ಲಿರುವವರನ್ನು ಅವರ ಸ್ವಚ್ಛಂದ ಬದುಕಿಗೆ ಅಡ್ಡಿ ಉಂಟಾದಾಗ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದು ಕೂಡ ಸರ್ಕಾರವೇ. ಆದರೆ ಇಲ್ಲಿ ಆಗುತ್ತಿರುವುದು ಬೇರೆ ಕಾಡಿನೊಳಗಿರುವ ವನ್ಯಪ್ರಾಣಿಗಳನ್ನು ರಕ್ಷಿಸುವ ಭರಾಟೆಯಲ್ಲಿ ಅದರ ಸಂತತಿಯನ್ನು ದ್ವಿಗುಣ ಗೊಳಿಸಲು ಉತ್ತೇಜನ ನೀಡುತ್ತಾ ಬರುತ್ತಿದ್ದಾರೆ.

Ad Widget . Ad Widget .

ಕಾಡಿನಲ್ಲಿ ಆಶ್ರಯ ದೊರಕದಿದ್ದಾಗ ನಾಡಿಗೆ ಬಂದು ರೈತರ ಗದ್ದೆ ತೋಟ ಹೊಲ ಎಲ್ಲವನ್ನು ಹಾಳು ಗೆಡವಿದಾಗ, ಹಲವು ಜೀವಗಳನ್ನು ಬಲಿ ತೆಗೆದುಕೊಂಡಾಗ ನಾಡಿನಲ್ಲಿರುವರು ಅದಕ್ಕೆ ಏನು ಉಪದ್ರ ಮಾಡದೆ ಮೌನ ವಹಿಸಬೇಕು ಎಂಬ ಧೋರಣೆ ಇದೆಯಲ್ಲ ಇದರ ಬಗ್ಗೆ ಇದೀಗ ಚಿಂತನ ಮಂಥನ ನಡೆಯಬೇಕಾಗಿದೆ.

Ad Widget . Ad Widget .

ಅರಣ್ಯ ದೊಳಗಿರುವ ಪ್ರಾಣಿಗಳನ್ನು ಸರ್ಕಾರದ ವನ್ಯಜೀವಿ ವಿಭಾಗ, ರಕ್ಷಿತಾ ಅರಣ್ಯ ವಿಭಾಗದವರು ನೋಡಿಕೊಳ್ಳಬೇಕು ಹಾಗೆ ಅರಣ್ಯದಿಂದ ನಾಡಿಗೆ ಬರದಂತೆಯೂ ಕೂಡ ಅವರೇ ತಡೆಗಟ್ಟಬೇಕು. ಆದರೆ ಇದೀಗ ಕಾಡಾನೆಗಳು ವನ್ಯಪ್ರಾಣಿಗಳು ಎಲ್ಲವೂ ಕೂಡ ನಾಡಿಗೆ ಲಗ್ಗೆ ಇಟ್ಟಾಗ ವನ್ಯಜೀವಿ ವಿಭಾಗ, ರಕ್ಷಿತ ಅರಣ್ಯ ಅಧಿಕಾರಿಗಳು ಇದು ನಮಗೆ ಸಂಬಂಧಿಸಿದಲ್ಲ ಎಂಬ ಧೋರಣೆ ತಾಳಿರುವುದು ಮತ್ತಷ್ಟು ಅನಾಹುತಗಳಿಗೆ ಕಾರಣವಾಗುತ್ತಿವೆ. ಮೀಸಲು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಸಿಬ್ಬಂದಿಗಳ ನಡುವೆ ಹೊಂದಾಣಿಕೆ ಇಲ್ಲದರಿಂದ, ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳು ಹೊಂದಾಣಿಕೆಯನ್ನು ಬಯಸದರಿಂದ ನಾಡಿನಲ್ಲಿರುವ ಮೀಸಲು ಅರಣ್ಯ ಇಲಾಖೆ ಸಿಬ್ಬಂದಿಗಳ ಗೋಳು ಹೇಳತೀರದಾಗಿದೆ. ಒಂದೆಡೆ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ನಡುವೆ ವನ್ಯಪ್ರಾಣಿಗಳನ್ನು ಓಡಿಸುವ ಸಾಹಸಕ್ಕೆ ಪ್ರತಿದಿನ ಕರ್ತವ್ಯ ಮಾಡಬೇಕಾಗುತ್ತದೆ.

ತಾತ್ಕಾಲಿಕವಾಗಿ ದಿನಗೂಲಿ ಆಧಾರದಲ್ಲಿ ಇದೀಗ ಕೆಲವು ಹುಡುಗರನ್ನು ಅರಣ್ಯ ಇಲಾಖೆ ಆನೆ ಹುಲಿ ಚಿರತೆ ಓಡಿಸಲು ಗೋಸ್ಕರ ಕರ್ತವ್ಯಕ್ಕೆ ನಿಯೋಜಿಸಿದರು ಕೂಡ ಯಾವುದೇ ತರಬೇತಿ ಇಲ್ಲದವರು ಇದನ್ನು ನಿಭಾಯಿಸಲು ಹೇಗೆ ಸಾಧ್ಯ? ಹಾಗೆ ಪ್ರತಿ ದಿನ ಇಂಥದ್ದೇ ಸಮಸ್ಯೆ ಅರಣ್ಯ ಇಲಾಖೆಗೆ ಎದುರಾದಾಗ ಎಲ್ಲಾ ಸಿಬ್ಬಂದಿಗಳನ್ನು ಅಲ್ಲಿ ನಿಯೋಜಿಸುವಾಗ ತಗಲುವ ಖರ್ಚು ವೆಚ್ಚ, ತಾತ್ಕಾಲಿಕ ಸಿಬ್ಬಂದಿಗಳಿಗೆ ನೀಡುವ ವೇತನ ಇಲಾಖೆ ಸಮರ್ಪಕವಾಗಿ ನೀಡದರಿಂದ, ಅರಣ್ಯ ಇಲಾಖೆ ಅಧಿಕಾರಿಗಳು ಭರಿಸುವ ಶಕ್ತಿ ಕಳೆದುಕೊಂಡಾಗ ಆನೆ ಓಡಿಸುವ ಕಾಯಕ ಅರ್ಧದಲ್ಲೇ ಮೊಟಕುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಮ್ಮ ತಮ್ಮ ವ್ಯಾಪ್ತಿಯಿಂದ ಈ ವನ್ಯಪ್ರಾಣಿಗಳನ್ನು ಓಡಿಸುತ್ತಾರೆ ಹೊರತು ಸಂಪೂರ್ಣ ಕಾಡಿಗೆ ಅಟ್ಟುವ ಕೆಲಸ ಪ್ರತಿ ವರ್ಷ ಆಗುತ್ತಿಲ್ಲ. ಇಂದು ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿದ್ದ ಆನೆಗಳೆಲ್ಲವೂ ಕೂಡ ಇದೀಗ ಬೀರುಗ ಕುರ್ಚಿ ಗ್ರಾಮದಲ್ಲಿವೆ. ಇನ್ನು ಇಲ್ಲಿಂದ ಓಡಿಸಿದರೆ ಕುಟ್ಟ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಮೀಸಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ನಡುವೆ ಅನುಭವ ಇಲ್ಲದ ತಾತ್ಕಾಲಿಕ ಸಿಬ್ಬಂದಿಗಳು ಆನೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಿಸುತ್ತಾರೆ ಅಷ್ಟೇ ಹೊರತು ಬೇರೇನು ಆಗುತ್ತಿಲ್ಲ.

ವನ್ಯಜೀವಿ ವಿಭಾಗದಲ್ಲಿ ಕೂಡ ಸಿಬ್ಬಂದಿಗಳ ಕೊರತೆ,ನಡುವೆ ಅಲ್ಲಿನ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ವೈದ್ಯರಲ್ಲದವರಿಂದ ಅರವಳಿಕೆ ಮದ್ದನ್ನು ವನ್ನೆಪ್ರಾಣಿಗಳಿಗೆ ನೀಡುವ ಪ್ರಮೇಯ ಇವರಿಗೆ ಒದಗಿ ಬಂದಿದೆ. ಇದರಿಂದ ಹಲವು ವನ್ಯಪ್ರಾಣಿಗಳು ಇಹಲೋಕ ತ್ಯಜಿಸಲು ಕಾರಣವಾಗುತ್ತಿವೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದಕ್ಕೊಂದು ಮಾರ್ಗೋಪಾಯವನ್ನು ಕಂಡುಹಿಡಿಯದರಿಂದ ಬಡ ರೈತ,ಕಾಫಿ ಬೆಳೆಗಾರ, ಕೂಲಿ ಕಾರ್ಮಿಕ ಬದುಕುವುದೇ ಕಷ್ಟಕರವಾಗಿದೆ.

ರಾಜ್ಯದಲ್ಲಿ ಸರ್ಕಾರ ಬದಲಾಗಿ ಒಂದು ವರ್ಷ ಕಳೆದಿದೆ, ಅರಣ್ಯ ಸಚಿವರು ಕಳೆದ ಕೆಲವು ತಿಂಗಳ ಹಿಂದೆ ಕೊಡಿಗಿಗೆ ಭೇಟಿ ನೀಡಿ ಸಭೆ ನಡೆಸಿ ಸೂಕ್ತ ಪರಿಹಾರ ಶೀಘ್ರದಲ್ಲಿ ದೊರಕಿಸುತ್ತೇನೆ ಎಂದು ಹೇಳಿ ಹೋದವರ ಅಡ್ರೆಸ್ಸೆ ಇಲ್ಲ ಎನ್ನುತ್ತಾರೆ ಇಲ್ಲಿನ ಜನತೆ. ಕ್ಷೇತ್ರದ ಶಾಸಕರುಗಳು ಕೂಡ ಹೆಚ್ಚಿನ ಮುತುವರ್ಜಿ ಈ ಬಗ್ಗೆ ವಹಿಸುತ್ತಿಲ್ಲ ಎಂಬ ಆರೋಪವೂ ಕೂಡ ಕೇಳಿ ಬರುತ್ತಿದೆ. ಇನ್ನು ಸಂಸದರು ಆರು ಪಥದ ರಸ್ತೆ ನಿರ್ಮಾಣದ ಬಗ್ಗೆ ತಲೆಕೆಡಿಸಿಕೊಂಡರೆ ಹೊರತು ಕೊಡಗಿನ ಆನೆ ಮಾನವ ಸಂಘರ್ಷದ ಬಗ್ಗೆ ಕೇಂದ್ರದಲ್ಲಿ ವ್ಯವಹರಿಸಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕೊಡಗಿನ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಕಾರ್ಮಿಕರು ಕಾಫಿ ತೋಟಕ್ಕೆ ತೆರಳಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಕಾಫಿ ಬೆಳಗಾರು ಕಾರ್ಮಿಕರಿಲ್ಲದೆ ತೋಟವನ್ನು ಮಾರುವ ಹಂತಕ್ಕೆ ತಲುಪಿದ್ದಾರೆ. ತೋಟದ ಮನೆಯಲ್ಲಿ ಬದುಕು ಸಾಗಿಸುತ್ತಿರುವವರು ಭಯದ ವಾತಾವರಣದಲ್ಲೇ ಜೀವವನ್ನು ಪಣಕ್ಕಿಟ್ಟು ಬದುಕುತ್ತಿದ್ದಾರೆ. ಯಾರೇ ಜನ ನಾಯಕ ಬಂದರೂ ಕೂಡ ನಮಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎನ್ನುತ್ತಾರೆ ಹಲವು ರೈತರು. ಇನ್ನೂ ಬಿರುನಾಣಿ,ತೆರಾಲು ಭಾಗದಲ್ಲಿ ಕೆಲವರು ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕ್ರಿಮಿನಾಶಕ ಔಷಧಿಗಳನ್ನು ಮರ-ಗಿಡಗಳಿಗೆ ಸಿಂಪಡಿಸಿ ಅದನ್ನು ಒತ್ತುವರಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಿದರು ಕೂಡ ಉನ್ನತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಈ ಭಾಗದ ಜನರು. ಒಂದೆಡೆ ಕೆಲವರು ಅರಣ್ಯ ವ್ಯಾಪ್ತಿಗೆ ಸೇರಿದ ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿರುವುದರಿಂದ ವನ್ಯ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ದೊರಕಬೇಕಾದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದ್ವಂದ್ವ ನೀತಿಗಳು, ವನ್ಯಜೀವಿ ಹಾಗೂ ಮೀಸಲು ಅರಣ್ಯ ಇಲಾಖೆಯ ನಡುವೆ ಇರುವ ವ್ಯತ್ಯಾಸಗಳು, ನಾಡಿನಲ್ಲಿರುವವರು ವನ್ಯಜೀವಿಗಳಿಗೆ ಸೇರಿದ ಜಾಗವನ್ನು ಉತ್ತುವರಿ ಮಾಡಿಕೊಂಡಿದ್ದರೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸುವುದು. ಹಾಗೆ ಈ ಎಲ್ಲಾ ಅಂಶಗಳಿಗೆ ರಾಜಕೀಯ ನುಸುಳದಂತೆ ನೋಡಿಕೊಂಡರೆ ಖಂಡಿತವಾಗಿ ಆನೆ ಮತ್ತು ಮಾನವ ಸಂಘರ್ಷಕ್ಕೆ ಪರಿಹಾರ ದೊರಕಬಹುದು. ಪ್ರಯತ್ನಿಸುವ ಇಚ್ಛಾಶಕ್ತಿ ಎಲ್ಲರಲ್ಲೂ ಇರಬೇಕಷ್ಟೇ.

Leave a Comment

Your email address will not be published. Required fields are marked *