ಸಮಗ್ರ ನ್ಯೂಸ್ : ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರ ಮೇಲೆ ನಿರಂತರ ಜೇನು ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಸಿದ್ಧ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಕಳೆದ ಎರಡು ದಿನಗಳಲ್ಲಿ 30ಕ್ಕೂ ಅಧಿಕ ಪ್ರವಾಸಿಗರಿಗೆ ಜೇನು ದಾಳಿ ಮಾಡಿದ್ದು, ಇಂದು ಜೇನು ಕಡಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ನಾಲ್ವರು ಪ್ರವಾಸಿಗರಿಗೆ ಹುಬ್ಬಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ನೀರಲ್ಲಿ ಆಟವಾಡಲು ಸಾತೊಡ್ಡಿ ಫಾಲ್ಸ್‌ಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತಿದ್ದು, ಜಲಪಾತದ ಬಳಿಯೇ ಪ್ರವಾಸಿಗರ ಮೇಲೆ ಜೇನುಹುಳಗಳು ನಿರಂತರ ದಾಳಿ ಮಾಡುತ್ತಿದೆ.
ಜೇನುಹುಳುಗಳ ದಾಳಿ ಹಿನ್ನೆಲೆ ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿ ಬಿಸಗೋಡ ಕ್ರಾಸ್‌ನಲ್ಲಿ ಬ್ಯಾನರ್ ಅಳವಡಿಸಿ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.