ಸಮಗ್ರ ನ್ಯೂಸ್ : ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮೋದಿ ಅವರು ನಾಳೆ ಮೈಸೂರಿಗೆ ಆಗಮಿಸುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ದೇಶದ ಜನರಿಗೆ ಸತತವಾಗಿ ಸುಳ್ಳು ಹೇಳಿದ, ನೀಡಿದ ಭರವಸೆಗಳನ್ನು ಈಡೇರಿಸದ ನರೇಂದ್ರ ಮೋದಿ ಅವರು ಯಾವ ಮುಖ ಇಟ್ಟುಕೊಂಡು ಮತ ಕೇಳಲು ಕರ್ನಾಟಕಕ್ಕೆ ಬರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕೃಷ್ಣರಾಜದಲ್ಲಿ ನಡೆದ ಜನಧ್ವನಿ-2 ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸುಳ್ಳು ಹೇಳಿದರೆ ಜನ ಮೋದಿ ಮೋದಿ ಎನ್ನುತ್ತಾರೆ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರು ಸುಳ್ಳು ಹೇಳುವುದನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರು.
ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದಿದ್ದರು. ವಿದೇಶದಿಂದ ಕಪ್ಪು ಹಣ ತರುತ್ತೇನೆ ಅಂದ್ರು, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ್ರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು, ಡೀಸೆಲ್- ಪೆಟ್ರೋಲ್, ಗ್ಯಾಸ್, ರಸಗೊಬ್ಬರದ ಬೆಲೆ ಕಡಿಮೆ ಮಾಡ್ತೀವಿ ಅಂದ್ರು, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸ್ತೀವಿ ಅಂದರು. ಹೀಗೆ ರಾಶಿ ರಾಶಿ ಸುಳ್ಳುಗಳ ಮೂಲಕವೇ ಭಾರತೀಯರನ್ನು ನಿರಂತರವಾಗಿ ಬಕ್ರಾ ಮಾಡಿ ವಂಚಿಸಿದರು. ಹತ್ತು ವರ್ಷಗಳ ಕಾಲ ನಿಮ್ಮನ್ನು ವಂಚಿಸಿದವರಿಗೇ ಮತ ಹಾಕೋಕೆ ನಿಮಗೆ ಮನಸ್ಸು ಬರುತ್ತದೆಯೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಬಡವರು, ದುಡಿಯವ ವರ್ಗಗಳ ಪರವಾಗಿ, ಮಹಿಳೆಯರ ಪರವಾಗಿ ಮಾಡಿದ ಒಂದೇ ಒಂದು ಕೆಲಸ ಯಾರಿಗಾದರೂ ಗೊತ್ತಾ ಎಂದು ಪ್ರಶ್ನಿಸಿದ ಅವರು, ಕೇವಲ ಸುಳ್ಳುಗಳನ್ನು ಸೃಷ್ಟಿಸಿ, ಭಾವನಾತ್ಮಕವಾಗಿ ಕೆರಳಿಸದವರಿಗೆ ಮತ ಹಾಕಿದರೆ ನೀವು ಮೋಸಹೋದಂತೆ ತಾನೇ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್. ಬಡತನ ನಿರ್ಮೂಲನೆಗೆ ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದರು. ಕೇವಲ ಅತ್ಯಂತ ಶ್ರೀಮಂತರಿಗಾಗಿ ಕೆಲಸ ಮಾಡಿದ ಮೋದಿ ಬಡವರಿಗಾಗಿ, ಬಡತನ ಹೋಗಲಾಡಿಸಲು ಒಂದಂಶದ ಕಾರ್ಯಕ್ರಮವನ್ನೂ ಏಕೆ ಕೊಡಲಿಲ್ಲ? ಇಂತಹ ಬಿಜೆಪಿಗೆ ಒಂದೂ ಮತ ಹಾಕಬೇಡಿ ಎಂದು ಕರೆ ನೀಡಿದರು.