ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರಿಗೆ ಇಂದು ಮಳೆರಾಯನ ಆಗಮನದ ಸಾಧ್ಯತೆ ಇದ್ದು, ಇಂದು ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಇದೆ. ನಗರದಲ್ಲಿ ಬೆಳಗ್ಗಿನಿಂದಲೂ ತಂಪಾಗಿರುವ ವಾತಾವರಣ ಇದ್ದು, ಸಿಟಿಯ ಹಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇದೆ ಎಂದು ಖಾಸಗಿ ಮಾಧ್ಯಮಕ್ಕೆ ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ತಾಪಮಾನ ಕಡಿಮೆ ಆಗುತ್ತಿದೆ. ಏಪ್ರಿಲ್ ಮೊದಲನೇ ವಾರ ತಾಪಮಾನ ಸರಾಸರಿ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕಳೆದ 15 ವರ್ಷಗಳಲ್ಲಿ ದಾಖಲಾದ ಮೂರನೇ ದಾಖಲೆ ಉಷ್ಣಾಂಶ ಆಗಿತ್ತು. ಕಳೆದ 8 ವರ್ಷಗಳಲ್ಲಿ ದಾಖಲಾದ ದಾಖಲೆಯ ಉಷ್ಣಾಂಶ ಆಗಿತ್ತು ಎಂದು ತಿಳಿಸಿದ್ದಾರೆ.
ಮುಂದಿನ ಎರಡು ಮೂರು ತಿಂಗಳಿಗೆ ತಾಪಮಾನ ಎರಡರಿಂದ ಮೂರು ಡಿಗ್ರಿ ಅಷ್ಟು ಕಡಿಮೆ ಆಗಲಿದ್ದು, 35-36 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಇವತ್ತು ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲು ಪ್ರದೇಶದಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವೆಡೆ ಮಳೆ ಸಾಧ್ಯತೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ತಿಳಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಎರಡು ಡಿಗ್ರಿಯಷ್ಟು ಕಡಿಮೆಯಾಗಿದೆ. ಮುಂದಿನ ಒಂದು ವಾರ ವರೆಗೂ ತಾಪಮಾನ ಹೆಚ್ಚಳ ಆಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.
ಇನ್ನು, ನಿನ್ನೆ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಅತ್ಯಾಧಿಕ ಅಂದರೆ 2-3 ಸೆಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಮಡಿಕೇರಿಯಲ್ಲಿ ಹಗುರ ಮಳೆಯಾಗಿದೆ. ಇವತ್ತು ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮುಂದಿನ ಒಂದು ವಾರದ ಮಳೆ ಮುನ್ಸೂಚನೆ ನೋಡುವುದಾದರೆ, ಕರಾವಳಿಯಲ್ಲಿ ಹಗುರ ಮಳೆ, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ ಮೂರು ದಿನಗಳ ಬಳಿಕ ಮಳೆ ಕಡಿಮೆ ಆಗಲಿದ್ದು, ಏಪ್ರಿಲ್ 15ರ ಬಳಿಕ ನಾವು ಮುಂಗಾರು ಮಳೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ. ಮೇ ತಿಂಗಳ ಹವಾಮಾನ ಮುನ್ನೆಚ್ಚರಿಕೆ ಬಗ್ಗೆ ತಿಂಗಳ ಅಂತ್ಯದ ವೇಳೆಯಲ್ಲಿ ಮಾಹಿತಿ ನೀಡುತ್ತೇವೆ ಎಂದು ವಿವರಿಸಿದ್ದಾರೆ.
ಇನ್ನು, ಇಂದು ಮತ್ತು ನಾಳೆ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಆದರೆ ಗುಡುಗು ಸಹಿತ ಚಂಡಮಾರುತದ ಚಟುವಟಿಕೆಯು ಉಳಿಯುವ ಸಾಧ್ಯತೆಯಿಲ್ಲ. 2024ರ ಮೊದಲ ಮಳೆಯನ್ನು ಬೆಂಗಳೂರಿಗರು ಪಡೆಯುವ ಸಾಧ್ಯತೆ ಇದ್ದು, ಬಹುದಿನಗಳ ಮಳೆರಾಯನ ಆಗಮನದ ನಿರೀಕ್ಷೆ ಅಂತ್ಯವಾಗುವ ನಿರೀಕ್ಷೆ ಇದೆ. ನಗರದಲ್ಲಿ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ನಿಧಾನವಾಗಿ ತೆರವಾಗುತ್ತಿದ್ದು, ಬಿಸಿಲು ಇಣುಕುತ್ತಿದೆ.