ಸಮಗ್ರ ನ್ಯೂಸ್: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್) ಇತಿಹಾಸದಲ್ಲೇ ನಂದಿನಿ ಹಾಲು ಮತ್ತು ಮೊಸರು ದಾಖಲೆ ಮಟ್ಟದಲ್ಲಿ ಮಾರಾಟವಾಗಿದ್ದು, ಬಿರು ಬೇಸಿಗೆ ಮತ್ತು ಸಾಲು ಸಾಲು ಹಬ್ಬಗಳೇ ಇದಕ್ಕೆ ಕಾರಣ ಎನ್ನಲಾಗಿದೆ.
ಏಪ್ರಿಲ್ 6 ರಂದು ಒಂದೇ ದಿನ 13.56 ಲಕ್ಷ ಲೀಟರ್ ಸ್ಯಾಚೆಟ್ ಮೊಸರು ಮತ್ತು ಏಪ್ರಿಲ್ 11ರಂದು 51.60 ಲಕ್ಷ ಲೀಟರ್ ಸ್ಯಾಚೆಟ್ ಹಾಲು ಮಾರಾಟವಾಗಿದೆ. ಇದು ಕೆಎಂಎಫ್ ಇತಿಹಾಸದಲ್ಲೇ ಇಲ್ಲಿಯವರೆಗೆ ಒಂದೇ ದಿನದಲ್ಲಿ ಹಾಲು, ಮೊಸರಿನ ಅತ್ಯಧಿಕ ಮಾರಾಟದ ದಾಖಲೆ ಇದಾಗಿದೆ ಕೆಎಂಎಫ್ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ಹಾಲು ಮಾರಾಟದ ಪ್ರಗತಿಯು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಸರಾಸರಿ ಶೇ.10ರಷ್ಟು ಪ್ರಗತಿಯಾಗಿದೆ. ಹಾಗೆಯೇ ಮೊಸರಿನ ಮಾರಾಟ ಶೇ.22ರಷ್ಟು ಹೆಚ್ಚಾಗಿದೆ. ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನಗಳಿಗೂ ಸಹ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಪ್ರತಿ ದಿನ ಅಂದಾಜು 1.5 ಲಕ್ಷ ಲೀಟರ್ ಮಾರಾಟ ಮಾಡಲಾಗುತ್ತಿದ್ದು ಕಳೆದ ಸಾಲಿಗಿಂತ ಶೇ.30ರಷ್ಟು ಜಾಸ್ತಿಯಾಗಿದೆ. 2024 ಮಾರ್ಚ್ ತಿಂಗಳಲ್ಲಿ ನಂದಿನಿ ಐಸ್‍ಕ್ರೀಂ ಮಾರಾಟ ಶೇ.36ರಷ್ಟು ಹೆಚ್ಚಾಗಿದೆ. ಪ್ರತಿದಿನ ಸರಾಸರಿ 25,439 ಲೀಟರ್ ಐಸ್‍ಕ್ರೀಂ ಮಾರಾಟ ಮಾಡುವ ಮೂಲಕ ಕೆಎಂಎಫ್ ದಾಖಲೆ ನಿರ್ಮಿಸಿದೆ ಪ್ರಕಟಣೆಯಲ್ಲಿ ಹೇಳಲಾಗಿದೆ.