ಸಮಗ್ರ ನ್ಯೂಸ್ : ಬಿಜೆಪಿ ಯುವ ಮುಖಂಡ ಹಾಗೂ ಆರ್ ಎಸ್‌ಎಸ್ ಮುಖಂಡರಾದ ವಿಜಿ ಉರ್ಫ್ ಐನೆಟ್ ವಿಜಿರವರ ಎಂಜಿ ರಸ್ತೆಯಲ್ಲಿರುವ ಅಂಗಡಿ(ಕಚೇರಿ) ಮೇಲೆ ೨೦ ಕ್ಕೂ ಹೆಚ್ಚು ಮಂದಿ ದಾಳಿ ಮಾಡಿ ಹಲ್ಲೆ ನಡೆಸಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.
ಇಂದು ಬೆಳಗ್ಗೆ ತಮ್ಮ ಐ ನೆಟ್ ಕಚೇರಿಯಲ್ಲಿದ್ದ ವೇಳೆ ಏಕಾಏಕಿ ದಾಳಿ ಮಾಡಿರುವ ದುಷ್ಕರ್ಮಿಗಳು ವಿಜಯ್ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಕಚೇರಿ ಗಾಜು ಗಳನ್ನು ಸಹ ಪುಡಿಪುಡಿಯಾಗಿದೆ. ಇತ್ತೀಚೆಗೆ ಐನೆಟ್ ವಿಜಿ ಅವರು ಖಾಸಗಿ ಮಾಧ್ಯಮ ಒಂದಕ್ಕೆ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ ಎಂದು ಆರೋಪಿಸಲಾಗಿದ್ದು ಇದರ ಹಿಂದೆ ಹಾಸನ ಮಾಜಿ ಶಾಸಕರಾದ ಪ್ರೀತಂಗೌಡ ಅವರ ಬೆಂಬಲಿಗರ ಕೈವಾಡವಿದೆ ಎಂದು ವಿಜಯಕುಮಾರ್ ಮತ್ತವರ ಆಪ್ತರು ಆರೋಪಿಸಿದ್ದಾರೆ.
ಕ್ಷಣಾರ್ಧದಲ್ಲಿ ಅಂಗಡಿಗೆ ನುಗ್ಗಿ ವಿಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ ಗುಂಪು ಕೆಲವೇ ನಿಮಿಷದಲ್ಲಿ ಅಲ್ಲಿಂದ ಪಲಾಯನಗೊಂಡಿದೆ. ಬಳಿಕ ಸ್ಥಳಕ್ಕೆ ಹಾಸನ ಬಡಾವಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಗಾಯಗೊಂಡ ವಿಜಯ್‌ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ಲೋಕಸಭೆ ಚುನಾವಣೆ ಹಿನ್ನೆಲೆ ಕೆಲ ಬಿಜೆಪಿ ಬೆಂಬಲಿಗರು ಹಾಗೂ ಮುಖಂಡರು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಇಳಿದಿದ್ದರೆ. ಶಾಸಕ ಪ್ರೀತಮ್ ಗೌಡ ಬೆಂಬಲಿಗರು ಇತ್ತೀಚಿಗಷ್ಟೇ ಬೂತ್ ಮಟ್ಟದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರವನ್ನು ಆರಂಭಿಸಿದ್ದರು.
ಈ ನಡುವೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಮುಖಂಡರು ಮಾಜಿ ಶಾಸಕ ಪ್ರೀತಮ್ ಗೌಡ ಲೋಕ ಸಭೆ ಚುನಾವಣೆ ಸಂಬಂಧ ಯಾವುದೇ ಮಾತುಕತೆ ನಡೆಸದೆ ದೂರ ಉಳಿದಿದ್ದರು.
ಈ ಎಲ್ಲಾ ಬೆಳವಣಿಗೆ ನಡೆಯುತ್ತಿರುವ ಸಂದರ್ಭದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾಜಿ ಶಾಸಕ ಪ್ರೀತಂ ಗೌಡ ವಿರೋಧಿಗಳನ್ನು ಗುರುತಿಸಿ ಖುದ್ದು ಅವರ ಮನೆಗಳಿಗೆ ತೆರಳುವ ಮೂಲಕ ಚುನಾ ವಣೆಯಲ್ಲಿ ಬೆಂಬಲಿಸುವಂತೆ ಕೋರಿದ್ದರು. ಇದರಲ್ಲಿ ಐ ನೆಟ್ ವಿಜಯ್ ಕುಮಾರ್ ಅವರು ಪ್ರಮುಖರಾಗಿದ್ದಾರೆ .ವಿಜಯಕುಮಾರ್ ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿತ್ವದ ಸ್ನೇಹ ಜೀವಿಯಾಗಿದ್ದು ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಅವರು ಮಾಜಿ ಶಾಸಕ ಪ್ರೀತಮ್ ಗೌಡ ಅವರೊಂದಿಗೆ ಹಲವು ತಿಂಗಳುಗಳಿಂದ ಅಂತರ ಕಾಯ್ದುಕೊಂಡಿದ್ದು ಇತ್ತೀಚಿಗೆ ಸಾಮಾಜಿಕ ಜಾಲತಾಣದ ಚಾನೆಲ್ ಒಂದಕ್ಕೆ ಮಾತನಾಡುವ ಸಂದರ್ಭದಲ್ಲಿ ಈ ಬಾರಿ ಲೋಕಸಭೆ ಚುನಾ ವಣೆಯಲ್ಲಿ ಮೋದಿ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುವುದಾಗಿ ಹೇಳುತ್ತ, ಚುನಾವಣೆಯಲ್ಲಿ ಮಾಜಿ ಶಾಸಕ ಪ್ರೀತಮ್ ಗೌಡ ಅವರಿಗೂ ಒಂದೇ ಮತ, ನನಗೂ ಒಂದೇ ಮತ ಪ್ರೀತಂ ಗೌಡ ಒಬ್ಬರಿಂದಲೇ ಅಭ್ಯರ್ಥಿ ಸೋಲಿಸಲು ಸಾದ್ಯವಿಲ್ಲ ಎನ್ನುವಂತಹ ತಮ್ಮದೇ ಪಕ್ಷದ ಮಾಜಿ ಶಾಸಕ ಪ್ರೀತಂಗೌಡರ ವಿರುದ್ದ ವಿಜಯ್ ಹೇಳಿಕೆ ನೀಡಿದ್ದರು.
ಸಾಮಾಜಿಕ ಕಳಕಳಿಯ ವಿಜಯ್ ಕುಮಾರ್
ನಗರದ ಐನೆಟ್ ವಿಜಯಕುಮಾರ್ ಅವರು ಸರಳ ಸಜ್ಜನಿಕೆ ವ್ಯಕ್ತಿತ್ವದ ಸ್ನೇಹಜೀವಿಯಾಗಿದ್ದು ಅಪಾರ ಸ್ನೇಹ ಬಳಗವನ್ನೇ ಹೊಂದಿದ್ದಾರೆ. ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಮುಖಂಡರಾಗಿ ಗುರುತಿಸಿಕೊಂಡಿದ್ದ ಇವರು ಹಾಸನ ನಗರಸಭೆ ಚುನಾವಣೆಯಲ್ಲಿ ಸಹ ಸ್ಪರ್ಧೆ ಮಾಡಿದ್ದರು. ಇವರ ಹೇಳಿಕೆ ಮೂಲಕ ಉತ್ತರ ನೀಡಬೇಕಾದ ಸನ್ನಿವೇಶದಲ್ಲಿ ಹಲ್ಲೇ ಮಾಡಿರುವುದನ್ನು ಅವರ ಗೆಳೆಯರ ಬಳಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹುಲ್ಲಳ್ಳಿ ಸುರೇಶ್ -ಪ್ರೀತಮ್ ಗೌಡ ಬಣ ರಾಜಕೀಯ:
ಇಂದು ನಡೆದಿರುವ ವಿಜಯಕುಮಾರ್ ಮೇಲಿನ ಹಲ್ಲೆ ಪ್ರಕರಣ ಹುಲ್ಲಹಳ್ಳಿ ಸುರೇಶ್ ಹಾಗೂ ಪ್ರೀತಂ ಗೌಡ ಬಣಗಳ ನಡುವಿನ ಕಾದಾಟ ಎಂದು ವಿಶ್ಲೇಷಿಸಲಾಗಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಯೂ ಸಹ ಪ್ರೀತಂ ಗೌಡ ಬಣ ದೊಂದಿಗೆ ವಿಜಯ್ ಕುಮಾರ್ ಹಾಗೂ ಇತರರು ಅಂತರ ಕಾಯ್ದುಕೊಂಡಿದ್ದರು,
ಮೈತ್ರಿ ಅಭ್ಯರ್ಥಿ ಪರ (ಹುಲ್ಲಳ್ಳಿ ಸುರೇಶ್ ಬಣದ ) ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಪ್ರಚಾರದ ವೇಳೆ ಅನಗತ್ಯವಾಗಿ ಮಾಜಿ ಶಾಸಕ ಪ್ರೀತಂ ಜೆ ಗೌಡ ಅವರನ್ನು ಹೀಯಾಳಿಸುತ್ತಾ ನಿಂದಿಸುತ್ತಾ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸುವುದು, ಮಾದ್ಯಮಗಳಿಗೆ ಹೇಳಿಕೆ ನೀಡುತ್ತಿರುವುದು ಬಿಜೆಪಿ ಯೊಳಗಿನ ಬಣ ರಾಜಕೀಯ ಭಿನ್ನಮತ ಸ್ಫೋಟಗೊಳ್ಳಲು ಕಾರಣವಾಗಿದೆ. ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ರಬೇಕಾದ ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ವಿರೋಧಿ ಬಣಗಳ ವಿರುದ್ಧವೇ ಕದನಕ್ಕಿಳಿದಿರುವುದು ಬಿಜೆಪಿಯೊಳಗಿನ ಬಿರುಕು ಮತ್ತಷ್ಟು ಕಂದಕವಾಗಲು ಕಾರಣವಾಗಿದೆ.
ಐನೆಟ್ ವಿಜಯಕುಮಾರ್ ಅವರ ಮೇಲೆ ಹಲ್ಲೆ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಸುಮುಖ ರಘು , ನವೀನ್ ಆರ್ ನಾಗರಾಜ್ , ಗೋವಾ ಇತರರು ಆಸ್ಪತ್ರೆಗೆ ಭೇಟಿ ನೀಡಿ ವಿಜಯಕುಮಾರ್ ಅವರ ಆರೋಗ್ಯ ವಿಚಾರಿಸಿದರು. ಶಾಸಕ ಹುಲ್ಲಳ್ಳಿ ಸುರೇಶ್ ಕೂಡ ಇದ್ದರು. ಇದೇ ವೇಳೆ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್ ಅವರು, ಈ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.