ಸಮಗ್ರ ನ್ಯೂಸ್: ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಬಹುದಿನದ ಬೇಡಿಕೆಯಾದ ಅರಣ್ಯ ಕ್ಯಾಂಟೀನ್ ಸ್ಥಾಪನೆಗೆ ಇಲಾಖೆ ಮುಂದಾಗಿದ್ದು, ಚುನಾವಣೆಯ ನಂತರ ಆ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡು ಕ್ಯಾಂಟೀನ್ ಸ್ಥಾಪನೆಗೆ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ.
ಕಡಿಮೆ ಬೆಲೆಯಲ್ಲಿ ಪಡಿತರ ಸಿಗಲು ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲಿ ಅರಣ್ಯ ಕ್ಯಾಂಟೀನ್ ಸ್ಥಾಪಿಸುವಂತೆ ಹಲವು ವರ್ಷಗಳಿಂದ ಆಗ್ರಹಕ್ಕೆ ಪೂರಕವಾಗಿ ಕೆಲ ತಿಂಗಳ ಹಿಂದಷ್ಟೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಸುಭಾಷ್ ಮಾಲ್ಖೆಡೆ ಅವರು ಸೇನೆ ಮತ್ತು ಪೆÇಲೀಸ್ ಇಲಾಖೆಯಲ್ಲಿರುವಂತೆ ಅರಣ್ಯ ಇಲಾಖೆ ಸಿಬ್ಬಂದಿಗಾಗಿ ಅರಣ್ಯ ಕ್ಯಾಂಟೀನ್ ಸ್ಥಾಪಿಸುವಂತೆ ಶಿಫಾರಸು ಮಾಡಿದ್ದರು.
ತಮಿಳುನಾಡಿನಲ್ಲಿ ಪೊಲೀಸ್ ಸಿಬ್ಬಂದಿಗಾಗಿ ತಮಿಳುನಾಡು ಪೊಲೀಸ್ ಅಕಾಡೆಮಿಯಿಂದ ರಾಜ್ಯದೆಲ್ಲೆಡೆ 56 ಕ್ಯಾಂಟೀನ್‍ಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಪೊಲೀಸರು, ಅಗ್ನಿಶಾಮಕ ದಳ, ಬಂಧಿಕಾನೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಗೃಹ ಬಳಕೆ, ದಿನಸಿ ವಸ್ತುಗಳು ಸೇರಿದಂತೆ 15 ಸಾವಿರಕ್ಕೂ ಹೆಚ್ಚಿನ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಲು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಗೃಹ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ರಾಜ್ಯದ 14 ಸಾವಿರ ಪೊಲೀಸ್ ಸಿಬ್ಬಂದಿಯ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ 4 ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಪೊಲೀಸ್ ಕ್ಯಾಂಟೀನ್‍ಗಳಿವೆ. ಈ ಕ್ಯಾಂಟೀನ್‍ಗಳಲ್ಲಿ ದಿನಸಿ ಸಾಮಗ್ರಿಗಳು, ಎಲೆಕ್ಟ್ರಿಕ್ ವಸ್ತುಗಳು, ವಸ್ತ್ರಗಳು, ಪಾದರಕ್ಷೆ, ಪಾತ್ರೆ ಮುಂತಾದವುಗಳನ್ನು ಶೇ.30ರವರೆಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಆ ಕ್ಯಾಂಟೀನ್‍ಗಳಲ್ಲಿ ರಾಜ್ಯದ ಅರಣ್ಯ ಇಲಾಖೆಯ ಹಾಲಿ ಮತ್ತು ನಿವೃತ್ತ ಸಿಬ್ಬಂದಿ, ಅಧಿಕಾರಿಗಳಿಗೂ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ದೊರೆಯುವಂತೆ ಮಾಡಲಾಗುತ್ತಿದೆ.
ರಾಜ್ಯ ಅರಣ್ಯ ಇಲಾಖೆಗೆ 14,766 ಹುದ್ದೆಗಳನ್ನು ಮಂಜೂರಾಗಿದ್ದು, ಸದ್ಯ 8,551 ಹುದ್ದೆ ಭರ್ತಿ ಮಾಡಲಾಗಿದೆ. ಅದರ ಜತೆಗೆ 2 ಸಾವಿರಕ್ಕೂ ಹೆಚ್ಚಿನ ಹೊರಗುತ್ತಿಗೆ ನೌಕರರಿದ್ದಾರೆ. ಪೊಲೀಸ್ ಕ್ಯಾಂಟೀನ್ ಬಳಕೆಗೆ ಅವಕಾಶ ನೀಡುವುದರಿಂದ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 10 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ರಿಯಾಯಿತಿ ದರದಲ್ಲಿ ವಸ್ತುಗಳು ಸಿಗುವಂತಾಗಲಿದೆ. ಪ್ರಮುಖವಾಗಿ ಅರಣ್ಯ ಮತ್ತು ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.