ಸಮಗ್ರ ನ್ಯೂಸ್ : ಅಭ್ಯರ್ಥಿಯ ಪ್ರತಿಯೊಂದು ಆಸ್ತಿಯನ್ನು ತಿಳಿಯುವ ಹಕ್ಕು ಮತದಾರನಿಗೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧ ಪಡದ ಸಂಗತಿಯಲ್ಲಿ ಅಭ್ಯರ್ಥಿ ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕು ಇರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ಅರುಣಾಚಲಪ್ರದೇಶದ ತೇಜು ವಿಧಾನಸಭಾ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಕಾರಿಖೋಕ ಕ್ರಿ ಅವರ ಶಾಸಕ ಸ್ಥಾನವನ್ನು ಕೋರ್ಟ್ ಎತ್ತಿಹಿಡಿದಿದೆ. ಸರಿಯಾಗಿ ಆಸ್ತಿ ಘೋಷಣೆ ಮಾಡಿಲ್ಲವೆಂದು ಕಾರಿಖೋ ಕ್ರಿ ಅವರ ಶಾಸಕ ಸ್ಥಾನವನ್ನು ಅಸಿಂಧು ಎಂದು ತೀರ್ಮಾನಿಸಿದ್ದ ಗುವಾಹಟಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಚರಾಸ್ತಿ ಬಹಳ ದೊಡ್ಡ ಮೊತ್ತದ್ದಾಗಿದ್ದರೆ ಮತ್ತು ಐಷಾರಾಮಿ ಜೀವನಶೈಲಿಯನ್ನು ಬಿಂಬಿಸುತ್ತಿದ್ದರೆ ಮಾತ್ರ ಅದನ್ನು ಆಸ್ತಿ ಘೋಷಣೆಯ ಅಫಿಡವಿಟ್ನಲ್ಲಿ ಸೇರಿಸಬಹುದು. ಇಲ್ಲದಿದ್ದರೆ ಅಭ್ಯರ್ಥಿಗಳು ಪ್ರತಿಯೊಂದು ಚರಾಸ್ತಿಯ ವಿವರವನ್ನು ಬಹಿರಂಗಪಡಿಸುವ ಅಗತ್ಯ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸಂಜಯ್ ಕುಮಾರ್ ಅವರಿದ್ದ ಸುಪ್ರೀಂ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ.
ಕಾರಿಖೋ ಕ್ರಿ ಅವರ ಪತ್ನಿ ಮತ್ತು ಮಗ ಇಬ್ಬರ ಬಳಿ ಮೂರು ವಾಹನಗಳಿವೆ. ಅವನ್ನು ಕ್ರಿ ಅವರು ತಮ್ಮ ನಾಮಪತ್ರದ ವೇಳೆ ಅಫಿಡವಿಟ್ನಲ್ಲಿ ಸೇರಿಸಿಲ್ಲ. ಇದು ನಿಯಮಕ್ಕೆ ವಿರುದ್ಧವಾಗಿದೆ. ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಎಂದು ಕೋರಿ ಆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಪ್ರಶ್ನೆ ಮಾಡಿದ್ದರು. ಗುವಾಹಟಿ ಹೈಕೋರ್ಟ್ ಈ ಅಭಿಪ್ರಾಯವನ್ನು ಪುರಸ್ಕರಿಸಿತ್ತು.
ಆದರೆ, ಸುಪ್ರೀಂಕೋರ್ಟ್ನಲ್ಲಿ ಈ ವಾದ ನಿಲ್ಲಲಿಲ್ಲ. ಕಾರಿಖೋ ಕ್ರಿ ನಾಮಪತ್ರ ಸಲ್ಲಿಸುವ ಮುನ್ನ ಈ ವಾಹನಗಳನ್ನು ಬೇರೆಯವರಿಗೆ ಉಡುಗೊರೆ ಕೊಡಲಾಗಿರುವುದು ಮತ್ತು ಮಾರಾಟ ಮಾಡಲಾಗಿರುವುದು ಗೊತ್ತಾಗಿದೆ. ಹೀಗಾಗಿ, ಇವನ್ನು ಕ್ರಿ ಅವರ ಪತ್ನಿ ಮತ್ತು ಮಗನ ಮಾಲಕತ್ವದಲ್ಲಿ ಈಗಲೂ ಇದೆ ಎಂದು ಪರಿಗಣಿಸಲಾಗದು ಎಂದೂ ಕೋರ್ಟ್ ಹೇಳಿದೆ.