Ad Widget .

“ಜೀವನದ ಪಯಣದಲ್ಲಿ ಹೊಸ ವರುಷ ತರಲಿ ಹರುಷ”

ಸಮಗ್ರ ವಿಶೇಷ: ಯುಗಾದಿ ಚೈತ್ರಮಾಸದ ಮೊದಲ ದಿನ. ಇಂದು ಏಪ್ರಿಲ್ 9. ಈ ದಿನ ಹೊಸ ವರ್ಷದ ಮೊದಲ‌ ದಿನ. ಹೊಸ ವರ್ಷ, ಹೊಸತನ, ಹೊಸ‌ ವರುಷದ ಆರಂಭ… ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸುತ್ತಾರೆ. ಭಾರತದ ಅನೇಕ ಕಡೆಗಳಲ್ಲಿ ಯುಗಾದಿಯನ್ನು ಆಚರಿಸುತ್ತಾರೆ..‌ಆದರೆ ನಮ್ಮ‌ ತುಳುನಾಡಿನಲ್ಲಿ ಬಿಸ್ಸು(ವಿಷು) ವನ್ನು ಹೊಸ ವರ್ಷವನ್ನಾಗಿ ಆಚರಿಸುತ್ತಾರೆ.

Ad Widget . Ad Widget .

ಕೃಷಿ ಮತ್ತು ಪ್ರಕೃತಿ ಯುಗಾದಿಯೊಂದಿಗೆ ಮಧುರ ಸಂಬಂಧವನ್ನು ಬೆಳೆಸಿಕೊಂಡಿವೆ. ಪ್ರಕೃತಿಯಲ್ಲಿ ಪರಿವರ್ತನೆಯ ಕಾಲ. ಮರಗಳು ಚಿಗುರುತ್ತವೆ. ಹೂ ಹಾಗೂ ಹಣ್ಣುಗಳು ಅರಳುವ ಪಕ್ವಕಾಲ. ಋತುಗಳ ರಾಜ ವಸಂತ ಋತುವಿನ ಆಗಮನ.

Ad Widget . Ad Widget .

ಒಟ್ಟಿನಲ್ಲಿ ಗಿಡ, ಮರ, ಪಕ್ಷಿ, ಪ್ರಾಣಿಗಳಲ್ಲಿ ಉಲ್ಲಾಸದ ಸಮಯ. ಗೀತೆಯಲ್ಲಿಯೂ ಶ್ರೀಕೃಷ್ಣನು ತಾನು ಋತುಗಳಲ್ಲಿ ವಸಂತ ಎಂದಿರುತ್ತಾನೆ. ಅಂತೂ ಪ್ರಕೃತಿಯಲ್ಲಿ ರಮ್ಯ ಕಾಲ. ಮನಸ್ಸಿಗೆ ಮುದ ನೀಡುವ ಕಾಲ. ಯುಗಾದಿಯ ಆಚರಣೆಯೂ ಮನಸ್ಸಿಗೆ ಉತ್ಸಾಹ ತುಂಬುವ ಹಬ್ಬ. ಬೇಂದ್ರೆಯವರು ಹೇಳುವಂತೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.

ಬೇವು ಹಾಗೂ ಬೆಲ್ಲದ ಸೇವನೆ ಯುಗಾದಿಯ ಇನ್ನೊಂದು ವಿಶೇಷ. ಇದರಲ್ಲಿ ಆರೋಗ್ಯದ ಅಂಶ ಅಡಗಿದೆ. ಹಿಂದೆಯೆಲ್ಲಾ ಕೃಷಿಕರು ಮನೆಯಲ್ಲಿಯೇ ಉತ್ತಮ ಗುಣಮಟ್ಟದ ಬೆಲ್ಲವನ್ನು ತಯಾರಿಸುತ್ತಿದ್ದರು. ಅಂದಿನ ಡಬ್ಬಿ ಬೆಲ್ಲ ಇಂದಿಲ್ಲ. ಹಾಗಾಗಿ ಬೆಲ್ಲಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತಿದೆ.

ಬೇವು ಕಹಿ. ಜೀವನದಲ್ಲಿ ಸುಖ ಹಾಗೂ ಕಷ್ಟಗಳು ಒದಗಬಹುದು. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಸಂದೇಶ. ಇನ್ನೊಂದು ಅರ್ಥದಲ್ಲಿ ಸಿಹಿಯು ವೈಭವದ ಸಂಕೇತ. ಅದು ಅತಿಯಾದರೆ ಆರೋಗ್ಯಕ್ಕೆ ಹಾನಿ. ಬೇವಿನಂಥ ಕಹಿಯ ಅನುಭವ ಸಹಜವಾಗಿ ವೈಭವದ ಅಹಂಕಾರಕ್ಕೆ ಅಂಕುಶ ತೊಡಿಸಲಿ ಎಂಬ ಆಶಯ. ಕಹಿ ಬೇವು ಮಧುಮೇಹದ ನಿಯಂತ್ರಣಕ್ಕೆ ಉತ್ತಮ ಔಷಧ.

ನಮ್ಮ ಹಳ್ಳಿಗಳಲ್ಲಿ ಇಂದಿಗೂ ಇದರ ಸೇವನೆ ಇದೆ. ಬೇವಿನ ಮೂರು ಎಲೆಗಳನ್ನು ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿ, ನೀರು ಕುಡಿದರೆ ರಕ್ತದೊತ್ತಡ ನಿಯಂತ್ರಣವೆಂಬ ನಂಬಿಕೆಯೂ ಇದೆ. ಇದೆಲ್ಲ ಹಳ್ಳಿಯವರು ಸಸ್ಯಗಳೊಂದಿಗೆ ಬೆಳೆಸಿಕೊಂಡ ಸಂಬಂಧ.

ವಸಂತ ಕಾಲದ ಈ ಪರ್ವ ದಿನದಲ್ಲಿ.. ಎಲ್ಲವೂ ಹೊಸತನದಿಂದ ಕೂಡಿರುತ್ತದೆ…ಇದನ್ನು ಸುಗ್ಗಿಯ ದಿನವನ್ನಾಗಿ ಆಚರಿಸುತ್ತಾರೆ. ನಮ್ಮ‌ ದೇಶದ ಹಲವು ಕಡೆಗಳಲ್ಲಿ ಯುಗಾದಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸಿ ದೇವರಿಗೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ, ಮನೆಯವರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ.

ಮನೆಯನ್ನು ಮಾವಿನ ತೋರಣದಿಂದ ಅಲಂಕರಿಸುತ್ತಾರೆ. ಮನೆಯಲ್ಲಿ ಪಾಯಸ, ಹೋಳಿಗೆ ಮುಂತಾದ ಸಿಹಿ ತಿಂಡಿಗಳನ್ನೊಳಗೊಂಡ ಹಬ್ಬದ ಅಡುಗೆಯನ್ನು ಮಾಡುತ್ತಾರೆ.

ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.

ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ.

ಏನೆ ಆಗಲಿ…ಜೀವನದ ಪಯಣದಲ್ಲಿ ಹೊಸ ವರುಷ ಹರುಷ ತರಲಿ. ನವ ಬಾಳು ಬೆಳಗಲಿ, ನವ ಚೈತನ್ಯ ಚಿಮ್ಮಲಿ, ಕಹಿ ನೋವುಗಳು ತೊಲಗಿ, ಸಿಹಿ ನೋವುಗಳು ಬರಲಿ, ಶಾಂತಿ, ಸಮೃದ್ಧಿ ನೆಮ್ಮದಿಯ ಬಾಳು ನಿಮ್ಮದಾಗಿರಲಿ…

ಬರಹ: ಕಾವ್ಯ ಕೊರಂಬಡ್ಕ, ಪತ್ರಕರ್ತೆ

Leave a Comment

Your email address will not be published. Required fields are marked *