ಸಮಗ್ರ ನ್ಯೂಸ್: ಕೊಡಗಿನಲ್ಲಿ ಮಳೆ ಬಾರದೆ ಕಾವೇರಿ ನದಿ ಬತ್ತಿದ್ದು, ಭೀಕರ ಭಯದ ವಾತಾವರಣ ನಿರ್ಮಾಣವಾಗಿದೆ. ಮಳೆಯಿಲ್ಲದ ಕಾರಣದಿಂದಾಗಿ ಕಾಫಿ, ಕರಿಮೆಣಸು ಸೇರಿದಂತೆ ಬೆಳೆಗಳು ನಾಶವಾಗುವ ಭಯ ಶುರುವಾಗಿದೆ. ಮಳೆ ಬಂದರಷ್ಟೆ ಬದುಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿನ ಎಲ್ಲ ದೇಗುಲಗಳಲ್ಲಿ ಮಳೆಗಾಗಿ ಪೂಜೆ ಸಲ್ಲಿಸುವ ಕಾರ್ಯ ನಡೆಯುತ್ತಿದೆ.
ಈ ನಡುವೆ ಕುಶಾಲನಗರಕ್ಕೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಹೊರಭಾಗದಲ್ಲಿರುವ ಬಪ್ಪುರಾಯ ಸ್ವಾಮಿ ದೇವರಿಗೆ ಗ್ರಾಮಸ್ಥರು ಭಾನುವಾರ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಮಳೆ ಸುರಿಯುತ್ತದೆ ಎಂಬ ನಂಬಿಕೆ ಇರುವ ಕಾರಣ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿದೆ.
ಇದುವರೆಗೆ ಮಳೆಯ ಸಮಸ್ಯೆ ಇರಲಿಲ್ಲ ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಮಳೆ ಸುರಿಯುತ್ತಿದ್ದ ಕಾರಣ ವಾತಾವರಣ ತಂಪಾಗಿರುತ್ತಿತ್ತು. ಆದರೆ ಕಳೆದ ಬಾರಿಯೂ ಮಳೆ ಸುರಿದಿರಲಿಲ್ಲ. ಹೀಗಾಗಿ ಬಹಳಷ್ಟು ಕಡೆಗಳಲ್ಲಿ ಕಾಫಿ ಗಿಡಗಳು ಬಿಸಿಲಿನ ಝಳಕ್ಕೆ ಒಣಗಿ ಹೋಗಿದ್ದವರು. ಏಪ್ರಿಲ್ ತಿಂಗಳಲ್ಲಿ ಒಂದೆರಡು ಮಳೆ ಸುರಿದಿತ್ತು. ಆದರೆ ಈ ಬಾರಿಯೂ ಅದೇ ಪರಿಸ್ಥಿತಿ ನಿರ್ಮಾಣವಾಗಿರುವುದು ಜನ ದೇವರ ಮೊರೆ ಹೋಗುವಂತೆ ಮಾಡಿದೆ.
ಈ ನಡುವೆ ಬಪ್ಪುರಾಯ ಸ್ವಾಮಿ ದೇವರಿಗೆ ಗ್ರಾಮದ ಪ್ರಗತಿ ಪರ ಕೃಷಿಕ ಹೆಚ್.ಎಸ್.ಮಹೇಶ್ ಹಾಗೂ ಶಿಕ್ಷಕಿ ಸುನೀತಾ ಮಹೇಶ್ ದಂಪತಿ ಪೂಜೆ ಸಲ್ಲಿಸಲು ಮುಂದಾಗಿದ್ದು, ಅರಕಲಗೂಡಿನಿಂದ ಅರ್ಚಕರನ್ನು ಆಹ್ವಾನಿಸಿ ಗ್ರಾಮಸ್ಥರನ್ನು ದೇವರ ಸನ್ನಿಧಿಗೆ ಬರಮಾಡಿಕೊಂಡು ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸಾಮೂಹಿಕವಾಗಿ ಮಳೆ ಸುರಿಸಿ ಭೂಮಿಯನ್ನು ತಂಪುಗೊಳಿಸೆಂದು ಮಳೆರಾಯನನ್ನು ಪ್ರಾರ್ಥಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕೃಷಿಕ ಮಹೇಶ್, ಈ ಬಾರಿ ಪರಿಸ್ಥಿತಿ ಯಾವತ್ತೂ ಬಂದಿರಲಿಲ್ಲ. ಬರ ಇಡೀ ನಾಡನ್ನು ಆವರಿಸಿದೆ. ನದಿ, ಕೆರೆ ಸೇರಿದಂತೆ ಕೊಳವೆ ಬಾವಿಗಳು ಬತ್ತಿವೆ. ಜೀವ ನದಿ ಕಾವೇರಿ ಸಂಪೂರ್ಣ ಒಣಗುತ್ತಿದೆ. ಹಾಗಾಗಿ ಮಳೆ ಸುರಿಸಿ ನಾಡಿನ ಜನರನ್ನು ಉದ್ಧರಿಸು ಎಂದು ಗ್ರಾಮದ ರೈತರು ಹಾಗೂ ಗ್ರಾಮಸ್ಥರೊಂದಿಗೆ ಮಳೆಯ ದೇವರನ್ನು ಪ್ರಾರ್ಥಿಸಿದ್ದಾಗಿ ಹೇಳಿದ್ದಾರೆ.
ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ನೆರೆದ ಗ್ರಾಮಸ್ಥರಿಗೆಲ ಸಿಹಿ ಬೋಂದಿ ಪಾಯಸದ ಊಟ ನೀಡಲಾಯಿತು. ಪೂಜಾ ಕೈಂಕರ್ಯದಲ್ಲಿ ಮರೂರು ಗ್ರಾಮಸ್ಥರು ಭಾಗವಹಿಸಿದ್ದರು.