ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯನ್ನು ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸುಸೂತ್ರವಾಗಿ ಆಯೋಜಿಸುವುದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
‘ಸ್ಥಳಾಂತರಗೊಂಡ 24,500ಕ್ಕೂ ಹೆಚ್ಚು ಜನರು ಮತದಾನದ ಹಕ್ಕಿಗೆ ಅರ್ಹರಾಗಿದ್ದಾರೆ. ಅವರಿಗೆ ಆಶ್ರಯ ಶಿಬಿರಗಳಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಪ್ರದೀಪ್ ಕುಮಾರ್ ಝಾ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಒಟ್ಟು 2,955 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇವುಗಳಲ್ಲಿ ಶೇ 50ರಷ್ಟು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸ್ಥಳಾಂತರಗೊಂಡ ಜನರಿಗೆ ಮತದಾನ ಮಾಡಲು 94 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸ್ಥಳಾಂತರಗೊಂಡಿರುವ ಜನರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಆಶ್ರಯ ಶಿಬಿರಗಳಲ್ಲಿ ಮತಗಟ್ಟೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಚುನಾವಣೆ ಭದ್ರತೆಗಾಗಿ 200ಕ್ಕೂ ಹೆಚ್ಚು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಲೋಕಸಭೆಯ ಎರಡು ಕ್ಷೇತ್ರಗಳಿರುವ ಮಣಿಪುರದಲ್ಲಿ ಏಪ್ರಿಲ್ 19 ಹಾಗೂ 26ರಂದು ಮತದಾನ ನಡೆಯಲಿದೆ. ಫಲಿತಾಂಶ ಜೂನ್ 4ರಂದು ಹೊರಬೀಳಲಿದೆ.
ನಾಗರಿಕರಿಗೆ ತಮ್ಮ ಹಕ್ಕು ಚಲಾಯಿಸಲು ಜಾಗೃತಿ ಮೂಡಿಸುವ ಕಾರ್ಯಕ್ರಮ ಆರಂಭಗೊಂಡಿದೆ. ಈ ನಡುವೆ ಚುನಾವಣೆ ಬಹಿಷ್ಕರಿಸುವ ಭೀತಿಯೂ ಎದುರಾಗಿದೆ.