ಸಮಗ್ರ ನ್ಯೂಸ್: ಬಿಸಿಲ ಬೇಗೆ ನಡುವೆ ಏಪ್ರಿಲ್ 7ರಿಂದ 11ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಒಂದು ವಾರ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ. ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ತಿಂಗಳ ಅಂತ್ಯದವರೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಬೀದರ್, ಮೈಸೂರು, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಹಾವೇರಿ, ಧಾರವಾಡ, ಗದಗ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಮಂಡ್ಯ, ಹಾಸನ, ರಾಮನಗರ, ಚಿತ್ರದುರ್ಗ, ವಿಜಯನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಒಂದೆರಡು ಕಡೆ ಮಳೆಯಾಗುವ ಸಂಭವ ಇದೆ ಎಂದು ಹೇಳಲಾಗಿದೆ.
ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಗರಿಷ್ಠ ತಾಪಮಾನ ಏರಿಕೆ ಕಾಣುತ್ತಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ 1 ರಿಂದ 2 ಡಿ.ಸೆ. ತಾಪಮಾನ ಏರಿಕೆ ಕಾಣುತ್ತಿದೆ. ಕೆಲವು ಕಡೆಗಳಲ್ಲಿ ಸರಾಸರಿ 35ರಿಂದ 36 ಡಿ.ಸೆ. ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.