ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದ್ದು, ಮತದಾನ ಜಾಗೃತಿಗೆ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ಹಲವಾರು ಅಂಚೆ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಮತದಾನ ಜಾಗೃತಿಗೆ ಸಾಥ್ ನೀಡಿವೆ.
ಮತದಾನ ಜಾಗೃತಿಗೆ ಈ ಬಾರಿ ಅಂಚೆ ಇಲಾಖೆಯು ಕೈ ಜೋಡಿಸಿದ್ದು, ಪ್ರತಿ ಪೋಸ್ಟ್‌ನಲ್ಲಿಯೂ ಮತಜಾಗೃತಿ ಮೂಡಿಸುತ್ತಿದೆ. ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರಿಗೆ ಬರುವ ಪತ್ರಗಳ ಮೇಲೆ ‘ಚುನಾವಣೆ ಪರ್ವ, ದೇಶದ ಗರ್ವ’ ಎಂದು ಮೊಧಿಹರು (ಸೀಲ್)ಹಾಕಲಾಗುತ್ತಿದೆ. ಇನ್ನೊಂದೆಡೆ ಅಂಚೆ ಕಚೇರಿಯಲ್ಲಿ ಸಿಗುವ ಎನ್‌ವಲಪ್ ಕವರ್‌ಗಳಲ್ಲಿಯು ಸಹ ಮತದಾನದ ಜಾಗೃತಿ ಮೂಡಿಸುವಂತಹ ಕವರ್‌ಗಳನ್ನೆ ಇಡಲಾಗಿದೆ. ಖಾಕಿ ಕವರ್‌ಗಳಲ್ಲಿ ಪೋಸ್ಟ್ ಮಾಡುವ ಪತ್ರಗಳಿಗೂ ‘ಚುನಾವಣೆ ಪರ್ವ, ದೇಶದ ಗರ್ವ’ ಎಂದು ಸೀಲ್ ಹಾಕಿ ವಿಳಾಸಗಳಿಗೆ ಕಳುಹಿಸಲಾಗುತ್ತಿದೆ.
ಕೆಎಂಎಫ್ ಕೂಡ ಮತದಾನದ ಪಾವಿತ್ರ್ಯತೆ ಸಾರುವ ಮೂಲಕ ಪ್ರಜಾಪ್ರಭುತ್ವದ ಘನತೆ ತಿಳಿಸುತ್ತಿದೆ. ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ‘ಚುನಾವಣೆ ಪರ್ವ, ದೇಶದ ಗರ್ವ’ ಎಂಬ ಘೋಷಣೆ ಬರೆಸುವ ಮೂಲಕ ಸಾರ್ವಜನಿಕರಲ್ಲಿ ಮತ ಜಾಗೃತಿ ಮೂಡಿಸುತ್ತಿದೆ. ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಎಲ್ಲಾ ಚುನಾವಣೆಯಲ್ಲಿ ಜಾಗೃತಿ ಮೂಡಿಸಿದಂತೆ ಈ ಬಾರಿಯೂ ಮತದಾನದ ಮಹತ್ವ, ಪ್ರಾಮುಖ್ಯತೆ ಸಾರುತ್ತಿದೆ.
ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್‌ಗಳ ಮೇಲೂ ಮತ ಜಾಗೃತಿ ಮೂಡಿಸಲಾಗುತ್ತಿದೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಚುನಾವಣಾ ರಾಯಭಾರಿಗಳು ಹಾಗೂ ಐಕಾನ್‌ಗಳು ಮತದಾನ ಜಾಗೃತಿ ಬಗ್ಗೆ ಮಾತನಾಡಿರುವ ವಿಡಿಯೋಗಳನ್ನು ಎಲ್‌ಇಡಿ ಸ್ಕ್ರೀನ್‌ಗಳ ಮೇಲೆ ಪ್ರಸಾರ ಮಾಡಲಾಗುತ್ತಿದೆ.
ಕಸ ಸಂಗ್ರಹ ವಾಹನಗಳಲ್ಲಿ ಚುನಾವಣಾ ಆಯೋಗದ ‘ನಾ ಭಾರತ’ ಗೀತೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕಡಿಮೆ ಮತದಾನವಾಗಿರುವ ಮತಕೇಂದ್ರಗಳ ಸುತ್ತಮುತ್ತ ಇರುವ ಮನೆಮನೆಗೆ ಚುನಾವಣಾಧಿಕಾರಿಗಳು ಹೋಗಿ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.