ಸಮಗ್ರ ನ್ಯೂಸ್ : ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಧಿಸೂಚನೆ ಹೊರಬೀಳಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ, ತಾರಾ ಪ್ರಚಾರಕರನ್ನು ಜಿಲ್ಲೆಗೆ ಕರೆತರಲು ಯೋಜನೆ ರೂಪಿಸಿವೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಈಗಾಗಲೇ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದ್ದು, ಕಳೆದ ಕೆಲವು ದಿನಗಳಿಂದ ಬಿರುಸಿನ ಪ್ರಚಾರ ಕೂಡ ಕೈಗೊಂಡಿದ್ದಾರೆ.
ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಯ ದಿನ ಶಕ್ತಿ ಪ್ರದರ್ಶನ ಮಾಡಿ, ತಾರಾ ಪ್ರಚಾರಕರಿಂದ ಪ್ರಚಾರ ನಡೆಸಿ, ಚುನಾವಣಾ ಕಣ ರಂಗೇರಿಸಲು ಮುಂದಾಗಿವೆ.
ಬಿಜೆಪಿಯಿಂದ ಹಾಲಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರು ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಪರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಚಾರಕ್ಕೆ ಬರುವುದು ಈಗಾಗಲೇ ಬಹುತೇಕ ಖಚಿತವಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಜಿಲ್ಲೆಗೆ ಪ್ರಚಾರಕ್ಕೆ ಕಳಿಸಿಕೊಡಬೇಕೆಂದು ಬಿಜೆಪಿ ಜಿಲ್ಲಾ ಘಟಕವು ಪಕ್ಷಕ್ಕೆ ಮನವಿ ಮಾಡಿದೆ.
ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಕೂಡ ಹಿಂದೆ ಬಿದ್ದಿಲ್ಲ. ಆ ಪಕ್ಷದ ಘಟಾನುಘಟಿ ನಾಯಕರನ್ನು ಕರೆತಂದು ಪ್ರಚಾರ ಕೈಗೊಳ್ಳಲು ನೀಲನಕಾಶೆ ಸಿದ್ಧಗೊಳಿಸಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಪ್ರಕಾರ, ಏ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಜಿಲ್ಲೆಯಲ್ಲಿ ಪ್ರಚಾರ ಕೈಗೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಇನ್ನು, ಪಕ್ಷದ ಜಿಲ್ಲಾ ಘಟಕವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಮುಖ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರೆ ರಾಷ್ಟ್ರೀಯ ಮುಖಂಡರು ಪ್ರಚಾರಕ್ಕೆ ಬರಬೇಕೆಂದು ಮನವಿ ಮಾಡಿದೆ. ದೇಶದಾದ್ಯಂತ ಚುನಾವಣೆ ನಡೆಯುತ್ತಿರುವುದರಿಂದ ಸಮಯ ನೋಡಿಕೊಂಡು ಸೂಕ್ತ ದಿನಾಂಕ ನೀಡಲಾಗುವುದು ಎಂಬ ಭರವಸೆ ಸಿಕ್ಕಿದೆ ಎಂದು ಗೊತ್ತಾಗಿದೆ.
ತಳಮಟ್ಟದಲ್ಲಿ ನಡೆಯುತ್ತಿರುವ ಪ್ರಚಾರವನ್ನು ತಾರಾ ಪ್ರಚಾರಕರ ಮೂಲಕ ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿ, ಮತಬುಟ್ಟಿಗೆ ಕೈಹಾಕಲು ಎರಡೂ ಪಕ್ಷಗಳು ಮುಂದಾಗಿವೆ.
ಬಸವರಾಜ ಜಾಬಶೆಟ್ಟಿ-ಬಸವರಾಜ ಜಾಬಶೆಟ್ಟಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ. ಕಾಂಗ್ರೆಸ್ ಪಕ್ಷದ ಪ್ರಮುಖ ರಾಷ್ಟ್ರೀಯ ಮುಖಂಡರು ಬೀದರ್ ಜಿಲ್ಲೆಗೆ ಬಂದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲು ಮನವಿ ಮಾಡಲಾಗಿದೆ. ಇನ್ನಷ್ಟೇ ದಿನಾಂಕ ಅಂತಿಮಗೊಳ್ಳಬೇಕಿದೆ-ಸೋಮನಾಥ ಪಾಟೀಲ ಜಿಲ್ಲಾ ಬಿಜೆಪಿ ಅಧ್ಯಕ್ಷ. ಪ್ರಧಾನಿ ಕೇಂದ್ರ ಗೃಹಸಚಿವರು ಪ್ರಚಾರ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಜೊತೆಗೆ ನಟ/ನಟಿಯರು ನಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದಾರೆ.