ಸಮಗ್ರ ನ್ಯೂಸ್ : ಮಳೆಗಾಲದ ಅಭಾವದಿಂದ ಭೀಕರ ಬರಗಾಲ ಎದುರಿಸುತ್ತಿರುವ ಕಲಬುರಗಿ ಜನರು ಕುಡಿಯುವ ನೀರಿಗಾಗಿ ಸರಣಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ ಸೊನ್ನೆ ಡ್ಯಾಮನಲ್ಲಿ ನೀರು ಬಂದಿದ್ದು, ಅಲ್ಲಿಂದ ಪಕ್ಕದ ಗಾಣಗಾಪುರ ವರೆಗೆ ನೀರು ಹರಿಸಬೇಕು ಎಂದು ಇಂದು ರೈತಪರ ಹೋರಾಟಗಾರ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ನೇತೃತ್ವದಲ್ಲಿ ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹೋರಾಟಗಾರ ರಮೇಶ ಹೂಗಾರ, ರಾಜ್ಯದಲ್ಲಿ ರೈತರ ಕಷ್ಟಕ್ಕೆ ಬೆಲೆ ಇಲ್ಲದಂತಾಗಿದೆ. ಇಲ್ಲಿಯವರೆಗೆ ನಮ್ಮನಾಳುವ ಸರಕಾರಗಳು ರೈತರಿಗೆ ಬೆಳೆ ಪರಿಹಾರ ನೀಡಿಲ್ಲ.ಅದು ಒಂದು ಕಡೆ ಇದ್ದರೆ ಇನ್ನೊಂದು ಘನಘೋರ ಬರಗಾಲ ಎದುರಿಸುತ್ತಿರುವ ರೈತರ ಜಾನುವಾರುಗಳಿಗೆ ಕುಡಿಯಲು ಹಳ್ಳಕೊಳ್ಳಗಳಲ್ಲಿ ಬಾವಿಗಳಲ್ಲಿ ಹನಿ ನೀರು ಸಿಗುತ್ತಿಲ್ಲ.
ಇದನ್ನೆಲ್ಲ ಗಮನಿಸುತ್ತಿರುವ ಸರಕಾರಗಳು ಕಣ್ಣು ಕಿವಿ ಇಲ್ಲದಂತೆ ಸುಮ್ಮನೆ ಕುತಿವೆ. ಅಫಜಲಪುರ ತಾಲೂಕಿನ ಎಲ್ಲ ರೈತರ ಮತ್ತು ಹೋರಾಟಗಾರರ ಪ್ರತಿಫಲವಾಗಿ, ಸೊನ್ನ ಡ್ಯಾಮಗೆ ನೀರು ಬಂದಿದೆ.ಆದರೆ ಅಧಿಕಾರಿಗಳು ಘತ್ತರಗಿ, ಗಾಣಗಾಪುರ, ಶಿಪೂರ,ಬನ್ನೆಟ್ಟಿ,ಸೇರಿದಂತೆ ಹತ್ತು ಹಲವು ಹಳ್ಳಿಗಳಲ್ಲಿ ಹರಿದು ಹೋಗುವ ಭೀಮಾ ನದಿಗೆ ನೀರು ಹರಿಸದೆ ನಿರುತ್ಸಾಹ ತೋರುತ್ತಿದ್ದಾರೆ.
ಜನಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ವಿಳಂಬ ನೀತಿ ತೋರುತ್ತಿರುವ ಉದ್ದೇಶವಾದರು ಏನು? ಕೂಡಲೇ ಭೀಮಾನದಿಯ ದಡದಲ್ಲಿರುವ ಬಹು ದೊಡ್ಡ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಗಾಣಗಾಪುರ ಗೇಟ್ ವರೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿ ರೈತರಿಗೆ ಸಮಾಧಾನ ಹೇಳುವ ಮುಖಾಂತರ ತಹಶೀಲ್ದಾರ ಸಂಜೀವಕುಮಾರ ದಾಸರ ಅವರು ಮನವಿಯನ್ನ ಸ್ವೀಕರಿಸಿದರು. ನಂತರ ಪ್ರತಿಭಟನಾ ನೀರತ ರೈತರು ಮಹಿಳೆಯರು ಪ್ರತಿಭಟನೆಯನ್ನು ಮೊಟಕುಗೊಳಿಸಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ, ಅಶೋಕ ಹೂಗಾರ, ಸಿದ್ದು ದಣ್ಣೂರ, ಬಸವರಾಜ ಚಾಂದಕವಟೆ, ಲಕ್ಷ್ಮಪುತ್ರ ಮನ್ಮಿ, ರೈತಪ್ರಾಂತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಗಲೆಪ್ಪ ಪೂಜಾರಿ, ಭಾಗಣ್ಣಾ ಕುಂಭಾರ, ಸಿದ್ದು ಪೂಜಾರಿ, ಯಲ್ಲಪ್ಪ ಉಡಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.